ಬರ ಪರಿಸ್ಥಿತಿ-ಬೆಳೆ ನಷ್ಟಕ್ಕೆ ರೈತರಿಗೆ ಪರಿಹಾರ: 262ಕೋಟಿ ರೂ. ಸಬ್ಸಿಡಿ ಬಿಡುಗಡೆ

Update: 2017-05-06 14:32 GMT

 ಬೆಂಗಳೂರು, ಮೇ 6: ರಾಜ್ಯದಲ್ಲಿನ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಆಗಿರುವ ಬೆಳೆ ನಷ್ಟಕ್ಕೆ ರೈತರಿಗೆ ರಾಜ್ಯ ಸರಕಾರ 262.20ಕೋಟಿ ರೂ. ಇನ್‌ಪುಟ್ ಸಬ್ಸಿಡಿ ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಉಪಸ್ಥಿತಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪರಿಹಾರ ತಂತ್ರಾಂಶದ ಮೂಲಕ ಇನ್‌ಪುಟ್ ಸಬ್ಸಿಡಿಯನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದರು.

ಮುಂಗಾರು ಹಂಗಾಮಿಗೆ 2,942,79 ರೈತರಿಗೆ 168.4 ಕೋಟಿ ರೂ., ಹಿಂಗಾರು ಹಂಗಾಮಿಗೆ 1,82,270 ರೈತರಿಗೆ 93.82 ಕೋಟಿ ರೂ.ಗಳ ಇನ್‌ಪುಟ್ ಸಬ್ಸಿಡಿ ಬಿಡುಗಡೆಯಾಗಿದೆ. ಅಲ್ಲದೆ, ಹಿಂಗಾರು ಹಂಗಾಮಿನಲ್ಲಿ ಕಲಬುರಗಿ, ಬೀದರ್‌ನಲ್ಲಿ ಪ್ರವಾಹದಿಂದ ಉಂಟಾದ ಬೆಳೆ ನಷ್ಟಕ್ಕೆ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.

ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಈ ವರೆಗೆ 19.45ಲಕ್ಷ ಮಂದಿ ರೈತರಿಗೆ 1104.6ಕೋಟಿ ರೂ.ಗಳ ಇನ್‌ಪುಟ್ ಸಬ್ಸಿಡಿ ಬಿಡುಗಡೆ ಆಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

‘ಕೇಂದ್ರದಿಂದ 1,600 ಕೋಟಿ ರೂ.ಬಂದಿದ್ದು, ಆ ಪೈಕಿ 1ಸಾವಿರ ಕೋಟಿ ರೂ. ಗಳನ್ನು ಈಗಾಗಲೇ ವಿತರಿಸಲಾಗಿದೆ. ಹೆಚ್ಚುವರಿ ಬೇಡಿಕೆಯಿದ್ದರೆ ವಿತರಿಸಲು ಶೇ.20 ರಷ್ಟು ಹಣ ಉಳಿಸಿಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಕಳೆದ ಬಾರಿ ಸಮರ್ಪಕ ಸರ್ವೆಯಾಗದೆ ಹೆಚ್ಚುವರಿ ಬೇಡಿಕೆ ಬಂದಿತ್ತು. ಬರ ಪರಿಹಾರ ಸಂಬಂಧ ಕೇಂದ್ರ ಸಚಿವ ಅನಂತಕುಮಾರ್ ಯಾವಾಗಲು ಸತ್ಯ ಹೇಳುವುದಿಲ್ಲ’

-ಸಿದ್ಧರಾಮಯ್ಯ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News