ರಾಮನಗರದಲ್ಲಿ ಮಾವು ಅಭಿವೃದ್ಧಿ ಕೇಂದ್ರ: ವಿ.ಗೋಪಾಲಕೃಷ್ಣ

Update: 2017-05-06 17:46 GMT

ಮಂಡ್ಯ, ಮೇ 6: ನಗರದ ಕಾವೇರಿ ವನದ ಬಳಿ ಆರು ದಿನ ಆಯೋಜಿಸಿರುವ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮದ ಅಧ್ಯಕ್ಷ ವಿ. ಗೋಪಾಲಕೃಷ್ಣ ಚಾಲನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾವು ಬೆಳೆಗಾರರಿಗೆ ಮಾರುಕಟ್ಟೆ ವ್ಯವಸ್ಥೆ ಒದಗಿಸುವುದು ಹಾಗೂ ಗ್ರಾಹಕರಿಗೆ ಕಾರ್ಬೈಡ್ ಮುಕ್ತ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ಒದಗಿಸುವುದು ಮಾವು ಮೇಳದ ಉದ್ದೇಶವಾಗಿದೆ ಎಂದರು.

ಮಾವು ಅಭಿವೃದ್ಧಿ ಕೇಂದ್ರ: ಮಾವು ಬೆಳೆ ಉತ್ತೇಜಿಸಿ ರೈತರಿಗೆ ಸ್ಥೈರ್ಯ ತುಂಬುವ ಉದ್ದೇಶದಿಂದ ಮಾವು ಅಭಿವೃದ್ಧಿ ಸ್ಥಾಪಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಹೆಚ್ಚು ಅನುದಾನ ಒದಗಿಸಿದ್ದಾರೆ. ರಾಮನಗರದಲ್ಲಿ ಮಾವು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ ಎಂದು ಗೋಪಾಲಕೃಷ್ಣ ತಿಳಿಸಿದರು.

ಮಾವು ಬೆಳೆ ಉತ್ತೇಜನಕ್ಕೆ ರೈತರಿಗೆ ತರಬೇತಿ, ಅಧ್ಯಯನ ಪ್ರವಾಸ, ಸಬ್ಸಿಡಿಯಲ್ಲಿ ಪ್ಲಾಸ್ಟಿಕ್ ಕ್ರೇಟ್ಸ್, ಕಾರ್ಟನ್ ಬಾಕ್ಸ್, ಊಜಿನೊಣ ನಿಯಂತ್ರಣ ಪ್ಲಾಸ್ಕ್, ಪ್ಯಾಕ್ ಹೌಸ್ ನಿರ್ಮಾಣ, ಇನ್ನೂ ಹತ್ತುಹಲವಾರು ಕಾರ್ಯಕ್ರಮಗಳನ್ನು ನಿಗಮವು ರೂಪಿಸಿದೆ ಎಂದು ಅವರು ತಿಳಿಸಿದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಕದರೇಗೌಡ ಮಾತನಾಡಿ, ರಾಜ್ಯದಲ್ಲಿ ಎರಡು ಲಕ್ಷ ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗುತ್ತಿದೆ. ಕಳೆದ ವರ್ಷ 7 ಸಾವಿರ ಮೆಟ್ರಿಕ್ ಟನ್ ಮಾವು ರಪ್ತು ಮಾಡಲಾಗಿದ್ದು, ಈ ವರ್ಷ 10 ಸಾವಿರ ಮೆಟ್ರಿಕ್ ಟನ್ ರಪ್ತು ಗುರಿ ಹೊಂದಲಾಗಿದೆ. ಅಮೇರಿಕಾ, ಆಸ್ಟ್ರೇಲಿಯಾ, ಮಲೇಷಿಯ ಸೇರಿದಂತೆ ಯೂರೋಪಿಯನ್ ರಾಷ್ಟ್ರಗಳಲ್ಲಿ ಮಾವಿಗೆ ಬೇಡಿಕೆ ಇದೆ ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜೆ.ಪ್ರೇಮಕುಮಾರಿ, ನಗರಸಬೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಮಾಜಿ ಶಾಸಕ ಎಚ್.ಬಿ.ರಾಮು, ತೋಟಗಾರಿಕೆ ಉಪನಿರ್ದೇಶಕ ಕೆ.ರುದ್ರೇಶ, ಇತರರು ಮೇಳ ಉದ್ಘಾಟನೆ ವೇಳೆ ಹಾಜರಿದ್ದರು.

ಮಾವು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ: ಮಾವು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆರುದಿನಗಳ ಮೇಳದ ಆರಂದ ದಿನವಾದ ಶನಿವಾರವೇ ಮಾವು ಮಾರಾಟ ಮಳಿಗೆಗಳಲ್ಲಿ ನೂರಾರು ಗ್ರಾಹಕರು ಹಣ್ಣುಗಳನ್ನು ಖರೀದಿಸಿದರು.

ಸುಮಾರು 50 ಮಳಿಗೆಗಳನ್ನು ತೆರೆದಿದ್ದು, ಬಾದಮಿ, ಮಲಗೋವಾ, ಮಲ್ಲಿಕಾ, ಸೆಂಧೂರ, ರಸಪೂರಿ, ತೊತಾಪುರಿ, ಸಕ್ಕರೆಗುತ್ತಿ, ಬಾಗೇನ್‌ಪಲ್ಲಿ ಸೇರಿದಂತೆ 30 ಬಗೆ ತಳಿಯ ಹಣ್ಣುಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.

ಪ್ರತಿ ಕೆಜಿ ಬಾದಾಮಿಗೆ 70 ರೂ., ಮಲಗೋವಾಕ್ಕೆ 85 ರೂ., ಮಲ್ಲಿಕಾಕೆ 65 ರೂ., ಸೆಂಧೂರಕ್ಕೆ 30 ರೂ., ರಸಪೂರಿಗೆ 55 ರೂ., ತೊತಾಪುರಿಗೆ 20 ರೂ., ಸಕ್ಕರೆಗುತ್ತಿಗೆ 65 ರೂ. ಹಾಗೂ ಬಾಗೇನ್‌ಪಲ್ಲಿಗೆ 50 ರೂ.ಗಳನ್ನು ನಿಗದಿಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News