ನಿಮ್ಮನ್ನು ಯಾಕೆ ಹೊರಗೆ ಕಳುಹಿಸಿದ್ರು ನನಗೆ ಗೊತ್ತಿಲ್ಲ: ಈಶ್ವರಪ್ಪ
ಮೈಸೂರು, ಮೇ 7: ಇಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯಕಾರಣಿ ಸಭೆಗೆ ಮಾಧ್ಯಮ ಪ್ರತಿನಿಧಿಗಳಿಗೆ ಇಂದು ಪ್ರವೇಶ ನಿರಾಕರಿಸಲಾಗಿದ್ದು, " ನಿಮ್ಮನ್ನು ಯಾಕೆ ಹೊರಗೆ ಕಳುಹಿಸಿದ್ರು ನನಗೆ ಗೊತ್ತಿಲ್ಲ” ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಆಂತರಿಕ ಭಿಕ್ಕಟ್ಟಿನ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಯ ಹಿನ್ನೆಲೆಯಲ್ಲಿ ಮಾಧ್ಯಮಪ್ರತಿನಿಧಿಗಳನ್ನು ಸಭೆಯಿಂದ ಹೊರಗಿಡಲಾಗಿದೆ ಎಂದು ತಿಳಿದು ಬಂದಿದೆ.
ಸಮಸ್ಯೆ ಬಹಿರಂಗ ಹಿನ್ನೆಲೆಯಲ್ಲಿ ಮುಖ ತೋರಿಸಲು ಆಗುತ್ತಿಲ್ಲ. ಈ ಕಾರಣದಿಂದಾಗಿ ಮಾಧ್ಯಮಗಳನ್ನು ಬಿಜೆಪಿ ಕಾರ‍್ಯಕಾರಣಿಯಿಂದ ಹೊರಗಿಡಲಾಗಿದೆ ಎಂದು ಅರವಿಂದ ಲಿಂಬಾವಳಿ ಬಿಜೆಪಿಯ ಹಿರಿಯ ನಾಯಕರಿಗೆ ಸಮಜಾಯಿಷಿ ನೀಡಿದ್ದಾರೆ.
ಅರವಿಂದ್ ಲಿಂಬಾವಳಿ ಅವರು ಮಾಧ್ಯಮದ ಪ್ರತಿನಿಧಿಗಳನ್ನು ಹೊರಗಿಡಲು ರೂಪಿಸಿದ ಯೋಜನೆಯನ್ನು ಸ್ಥಳೀಯ ನಾಯಕರು ಪಾಲಿಸಿದ್ದಾರೆ. ಇದರಿಂದಾಗಿ ಮಧ್ಯಮಗಳ ಪ್ರವೇಶ ತಡೆಯಲು ಮೂರು ಹಂತದಲ್ಲಿ ತಪಾಸಣೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಇಂದು ಸಂಜೆ ಬಿಜೆಪಿ ಕಾರ‍್ಯಕಾರಣಿಯ ಸಮಾರೋಪ ನಡೆಯಲಿದೆ.