ರೈತರ ಸಾಲ ಮನ್ನಾ ಮಾಡಲು ಈಶ್ವರಪ್ಪ ಆಗ್ರಹ
ಮೈಸೂರು, ಮೇ 7: ರಾಜ್ಯ ಬಿಜೆಪಿ ಕಾರ‍್ಯಕಾರಣಿಯ ಎರಡನೆ ದಿನದ ಕಲಾಪ ಆರಂಭಗೊಂಡಿದ್ದು, ಕೊನೆಗೂ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ ಮಾತನಾಡಲು ಇಂದು ಅವಕಾಶ ಸಿಕ್ಕಿದೆ. " ಬರಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರಕಾರ ವಿಫಲವಾಗಿದೆ ಎಂದು ಈಶ್ವರಪ್ಪ ನಿರ್ಣಯ ಮಂಡಿಸಿದರು.
ರೈತರ ಸಾಲ ಮನ್ನಾ ಮಾಡಲು ಆಗ್ರಹಿಸಿದ ಈಶ್ವರಪ್ಪ ಅವರು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಎಡವಿದ್ದಾರೆ. ಸಮಸ್ಯೆ ಇರುವ ಕಡೆಗೆ ಹೋಗುತ್ತಿಲ್ಲ ಎಂದು ಎಂದು ಪರೋಕ್ಷವಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಜನರ ಕಷ್ಟವನ್ನು ನಾವು ಕೇಳಬೇಕಿತ್ತು. ಆದರೆ ನಾವು ಆ ನಿಟ್ಟಿನಲ್ಲಿ ಯೋಚನೆ ಮಾಡಲಿಲ್ಲ .ನೀರಿನ ಸಮಸ್ಯೆ ಇರುವ ಕಡೆ ಕಾರ್ಯಕರ್ತರು ಹೋಗುತ್ತಿಲ್ಲ ಎಂದರು.
ಬಿಎಸ್ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಭಿನ್ನಮತ ಮುಂದುವರಿದಿದೆ. ಬಿಜೆಪಿ ಕಾರ‍್ಯಕಾರಣಿಯ ವೇದಿಕೆಯಲ್ಲಿ ಇವರು ಮಾತನಾಡಲಿಲ್ಲ. ಇಬ್ಬರೂ ಒಟ್ಟಿಗೆ ಕುಳಿತುಕೊಂಡಿಲ್ಲ . ಈಶ್ವರಪ್ಪ ಮತ್ತು ಯಡಿಯೂರಪ್ಪ ಮಧ್ಯೆ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ‍್ ರಾವ್ ಕುಳಿತುಕೊಂಡಿದ್ದಾರೆ.