×
Ad

ಕರ್ಣಾಟಕ ಬ್ಯಾಂಕ್‌ ಚಿಕ್ಕಮಗಳೂರು ಶಾಖೆಯ ಸುವರ್ಣ ಮಹೋತ್ಸವ

Update: 2017-05-07 18:30 IST

ಚಿಕ್ಕಮಗಳೂರು, ಮೇ 7: ಕೇಂದ್ರ ಸರಕಾರ ಮತ್ತು ರಿಸರ್ವ್ ಬ್ಯಾಂಕ್ ಇತ್ತೀಚಿನ ದಿನಗಳಲ್ಲಿ ಮಾಡುತ್ತಿರುವ ಬಹಳಷ್ಟು ಬದಲಾವಣೆಗಳಿಂದಾಗಿ ಬ್ಯಾಂಕ್‌ಗಳ ವ್ಯವಹಾರ ಇಳಿಮುಖವಾಗುತ್ತಿದೆ. ಸರಕಾರದ ನಿಯಂತ್ರಣದಿಂದಾಗಿ ಬ್ಯಾಂಕ್‌ಗಳು ಮುಳುಗಿದರೆ ಅದನ್ನೇ ನಂಬಿರುವ ಗ್ರಾಹಕರ ಬದುಕು ಅಭದ್ರವಾಗುತ್ತದೆ. ಆದ್ದರಿಂದ ಕೇಂದ್ರ ಸರಕಾರ ಮತ್ತು ರಿಸರ್ವ್ ಬ್ಯಾಂಕ್, ಬ್ಯಾಂಕ್ ಗಳು ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು ಎಂದು ಹಿರಿಯ ಪತ್ರಕರ್ತ ಸ.ಗಿರಿಜಾ ಶಂಕರ್ ಹೇಳಿದ್ದಾರೆ.

ನಗರದ ಆದ್ರಿಕಾ ಹೋಟೆಲ್ ಸಭಾಂಗಣದಲ್ಲಿ ನಡೆದ ಕರ್ಣಾಟಕ ಬ್ಯಾಂಕ್‌ನ ಚಿಕ್ಕಮಗಳೂರು ಶಾಖೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೇಂದ್ರ ಸರಕಾರ ಮತ್ತು ರಿಸರ್ವ್ ಬ್ಯಾಂಕ್ ಸುಧಾರಣೆ ಮತ್ತು ಬದಲಾವಣೆಗಳನ್ನು ಜಾರಿಗೆ ತರುವ ಮುನ್ನ ಬ್ಯಾಂಕ್ ಅಧಿಕಾರಿಗಳಿಗೆ ನೂತನ ವ್ಯವಸ್ಥೆಯ ಬಗ್ಗೆ ತರಬೇತಿ ನೀಡಬೇಕು. ಗ್ರಾಹಕರಿಗೆ ವ್ಯವಹಾರದ ಬಗ್ಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಬ್ಯಾಂಕ್‌ಗಳಲ್ಲಿ ಗ್ರಾಹಕರ ಸೇವಾ ಕೇಂದ್ರಗಳನ್ನು ತೆರೆಯಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಜಿ ಎಂಎಲ್‌ಸಿ ಎಸ್.ವಿ.ಮಂಜುನಾಥ್ ಮಾತನಾಡಿ, ಕರ್ಣಾಟಕ ಬ್ಯಾಂಕ್ ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಕರ್ಣಾಟಕ  ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ಮಹಾಬಲೇಶ್ವರ ಅಧ್ಯಕ್ಷತೆ ವಹಿಸಿ ಮಾತನಾಡಿ, 1966 ರಲ್ಲಿ ಆರಂಭಗೊಂಡ ಚಿಕ್ಕಮಗಳೂರು ಶಾಖೆ ಇಂದು 25,650 ಗ್ರಾಹಕರನ್ನು ಹೊಂದಿದ್ದು, ವಾರ್ಷಿಕವಾಗಿ 300 ಕೋಟಿಯಷ್ಟು ವ್ಯವಹಾರ ನಡೆಸುತ್ತಿದೆ. ಚಿಕ್ಕಮಗಳೂರು ಶಾಖೆ 168 ಕೋಟಿ ಠೇವಣಿ, 132 ಕೋಟಿ ಮುಂಗಡ, 8 ಎ.ಟಿ.ಎಂ. ಮತ್ತು ಮಿನಿ ಇ ಲಾಬಿ ವ್ಯವಸ್ಥೆ ಹೊಂದಿದೆ ಎಂದು ಹೇಳಿದರು.

ಕರ್ಣಾಟಕ  ಬ್ಯಾಂಕ್ 2020ರ ವೇಳೆಗೆ ದೇಶಾದ್ಯಂತ ಒಂದು ಸಾವಿರ ಶಾಖೆಗಳನ್ನು ವಿಸ್ತರಿಸುವ ಗುರಿ ಹೊಂದಿದ್ದು, 1 ಕೋಟಿ 30 ಲಕ್ಷ ಗ್ರಾಹಕರನ್ನು, 2,500 ಎ.ಟಿ.ಎಂ., 250 ಇ ಲಾಬಿ ಮತ್ತು 20 ಸಾವಿರ ಪಾಸ್ ಮಿಷನ್‌ಗಳನ್ನು ಹೊಂದುವ ಗುರಿ ಇಟ್ಟುಕೊಂಡಿದೆ ಎಂದು ತಿಳಿಸಿದರು.

ಬ್ಯಾಂಕಿನ ಹಿರಿಯ ಗ್ರಾಹಕರನ್ನು ಮತ್ತು ಈ ಹಿಂದೆ ಸೇವೆ ಸಲ್ಲಿಸಿದ ಅಧಿಕಾರಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಬ್ಯಾಂಕಿನ ಆಡಳಿತ ನಿರ್ದೇಶಕ ಎಂ.ಎಸ್.ಮಹಾಬಲೇಶ್ವರ ಅವರನ್ನು ಗ್ರಾಹಕರ ವತಿಯಿಂದ ಅಭಿನಂದಿಸಲಾಯಿತು.

ಬ್ಯಾಂಕಿನ ಅಧಿಕಾರಿ ಜೆನ್ನಿಫರ್ ಮೋರಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಿವಮೊಗ್ಗ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ನಾಗರಾಜ ಐತಾಳ್ ಸ್ವಾಗತಿಸಿದರು. ಮುಖ್ಯ ಪ್ರಬಂಧಕ ಸುಧಾಕರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News