ಮೂಲಭೂತ ಸೌಕರ್ಯಗಳ ಕೊರತೆ: ಜಾನುವಾರುಗಳು ಕುಡಿಯುವ ನೀರನ್ನೇ ಅವಲಂಬಿಸಿರುವ ಕಣಿಯನಪುರ ನಿವಾಸಿಗಳು
ಗುಂಡ್ಲುಪೇಟೆ, ಮೇ 7: ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಕಣಿಯನಪುರ ಹಾಗೂ ಕಾಲನಿಗಳಿಗೆ ಸರಿಯಾದ ಕುಡಿಯುವ ನೀರಿನ ಸೌಲಭ್ಯವಿಲ್ಲದೆ ದನಗಳು ಕುಡಿಯುವ ನೀರನ್ನೇ ಗ್ರಾಮಸ್ಥರು ದಿನನಿತ್ಯದ ಅಗತ್ಯಗಳಿಗೆ ಬಳಕೆ ಮಾಡುವ ದುಸ್ಥಿತಿ ಬಂದೊದಗಿದೆ.
ಈ ಗ್ರಾಮಗಳಿಗೆ ರಸ್ತೆಯಿಲ್ಲದ ಕಾರಣ 30 ವರ್ಷಗಳಿಂದ ಸಂಚರಿಸುತ್ತಿದ್ದ ಬಸ್ ಸಂಚಾರ ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳು ಶಾಲೆಗೆ ಮಂಗಲ ಗ್ರಾಮದಿಂದ 2-3 ಕಿಲೋಮೀಟರ್ ದೂರ ಕಾಲ್ನಡಿಗೆಯಲ್ಲಿಯೇ ಹೋಗಬೇಕಾಗಿದೆ. ಅನಾರೋಗ್ಯದ ಸಂದರ್ಭ ತುರ್ತುವಾಹನಗಳೂ ಇಲ್ಲಿಗೆ ಬರಲಾಗದೆ ಬೈಕಿನಲ್ಲಿಯೇ ರೋಗಿಗಳನನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಗಿದೆ.
ಗ್ರಾಮಕ್ಕೆ ನೀರು ಪೂರೈಸುತ್ತಿದ್ದ ಕೊಳವೆಬಾವಿಗಳಲ್ಲಿ ನೀರು ಬತ್ತಿಹೋಗಿದ್ದು, ಬಾವಿಗಳಲ್ಲಿ ನೀರು ದೊರಕದ ಕಾರಣ ಗ್ರಾಪಂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದೆ. ದೊರಕುವ ಅಲ್ಪಸ್ವಲ್ಪ ನೀರನ್ನು ಜಾನುವಾರು ತೊಟ್ಟಿಗಳಿಗೆ ತುಂಬಿಸಲಾಗುತ್ತಿದ್ದು, ಟ್ಯಾಂಕರ್ ನೀರು ಸಂಗ್ರಹಿಸಲಾಗದವರು ಜಾನುವಾರು ತೊಟ್ಟಿಯ ನೀರನ್ನೇ ಕುಡಿಯಬೇಕಾದ ಅನಿವಾರ್ಯತೆಯುಂಟಾಗಿದೆ.
ಅಂಗನವಾಡಿ ಕೇಂದ್ರಗಳಿಗೂ ನೀರಿನ ಸರಾಬರಾಜಿಲ್ಲದ ಪರಿಣಾಮ ಪ್ಲಾಸ್ಟಿಕ್ ಡ್ರಂನಲ್ಲಿ ಟ್ಯಾಂಕರ್ ನೀರನ್ನು ಸಂಗ್ರಹಿಸಿದ್ದು, ಅಡುಗೆ ಹಾಗೂ ಶೌಚಾಲಯಕ್ಕೂ ಇದನ್ನೇ ಬಳಸಬೇಕಾಗಿದೆ. ಮಳೆಯ ಕೊರತೆ ಹಾಗೂ ಅಂತರ್ಜಲ ಇಳಿಕೆಯಿಂದ ವ್ಯವಸಾಯ ಚಟುವಟಿಕೆಗಳು ಸಂಪೂರ್ಣವಾಗಿ ನಿಂತು ಹೋಗಿದ್ದು, ಕೂಲಿ ಕಾರ್ಮಿಕರು ನಿರುದ್ಯೋಗಿಗಳಾಗಿದ್ದರೆ. ಅರಣ್ಯಪ್ರದೇಶದಲ್ಲಿಯೂ ಮಳೆಬೀಳದೆ ಜಾನುವಾರುಗಳಿಗೆ ಸಾಕಷ್ಟು ಪ್ರಮಾಣದ ಮೇವು ದೊರಕದೆ ಸಾವಿಗೀಡಾಗುತ್ತಿವೆ.
ನರೇಗಾ ಯೋಜನೆಯಲ್ಲಿ ಹೆಚ್ಚಿನ ಜನರಿಗೆ ಉದ್ಯೋಗ ನೀಡಬೇಕು, ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸಬೇಕು ಹಾಗೂ ಜಾನುವಾರುಗಳಿಗೆ ರಿಯಾಯಿತಿ ದರದಲ್ಲಿ ಮೇವು ವಿತರಣೆಗೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಗ್ರಾಮಗಳ ಬಳಿ ಕೊರೆಸಿದ ಕೊಳವೆ ಬಾವಿಗಳಲ್ಲಿ ನೀರು ದೊರಕದೆ ಇದ್ದುದರಿಂದ ಗ್ರಾಪಂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದೆ. ಒಡೆದುಹೋಗಿದ್ದ ಪೈಪ್‌ಲೈನ್ ದುರಸ್ತಿಗೊಳಿಸಲಾಗುತ್ತಿದೆ. ದೂರದ ಬುಡಗಾಡುಹುಂಡಿ ಸಮೀಪ ಕೊರೆಸಿದ ಕೊಳವೆ ಬಾವಿಯಲ್ಲಿ ನೀರು ದೊರಕಿದ್ದು ಪೈಪ್‌ಲೈನ್ ಮಾಡಿ ಸರಬರಾಜು ಮಾಡಲು ಕ್ರಿಯಾಯೋಜನೆ ತಯಾರಿಸಲಾಗಿದೆ.
-ರವಿ, ಮಂಗಲ ಗ್ರಾಪಂ ಅಭಿವೃದ್ಧಿ ಅಧಿಕಾರಿ