ಧಾರ್ಮಿಕ ಆಚರಣೆ, ಪ್ರಾರ್ಥನೆಗಳು ವಿಶ್ವದ ಐಕ್ಯತೆ ಬೆಸೆಯುತ್ತದೆ: ಎಚ್.ಕೆ. ಕುಮಾರಸ್ವಾಮಿ
ಹಾಸನ, ಮೇ 7: ಯಾವುದೇ ಧಾರ್ಮಿಕ ಆಚರಣೆ ಹಾಗೂ ಪ್ರಾರ್ಥನೆಗಳು ವಿಶ್ವದ ಐಕ್ಯತೆಯನ್ನು ಬೆಸೆಯುವ ಉದ್ದೇಶ ಹೊಂದಿರಬೇಕು. ವಿಶ್ವಶಾಂತಿಯೇ ಮಂತ್ರವಾದರೆ ಎಲ್ಲೆಲ್ಲೂ ನೆಮ್ಮದಿ ಹಾಗೂ ಸುಭಿಕ್ಷತೆ ತಾನಾಗಿಯೇ ಆವರಿಸಿಕೊಳ್ಳುತ್ತದೆ ಎಂದು ಆಲೂರು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ. ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಮುಳುಗಡೆಯಾಗಿದ್ದ ಕ್ರೈಸ್ತರ ಜಪಮಾಲೆ ಮಾತೆ ದೇವಾಲಯದ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾರ್ಥಕ್ಕಾಗಿ ಮಾಡುವ ಪ್ರಾರ್ಥನೆ ಎಂದಿಗೂ ಮಾನ್ಯವಾಗಲಾರದು. ನನ್ನಂತೆಯೇ ಇತರರು ಎನ್ನುವ ಮಹೋದ್ದೇಶ ಧಾರ್ಮಿಕ ಆಚರಣೆಗಳಲ್ಲಿ ಇರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಚಿಕ್ಕಮಗಳೂರು ಕ್ರೈಸ್ತ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ವಂದನೀಯ ಅಂತೋಣಿಸ್ವಾಮಿ, ಮನಸ್ಸುಗಳು ದೇಗುಲಗಳಾಗದ ಹೊರತು ದೇವಾಲಯಗಳನ್ನು ವೈಭವೀಕರಿಸಿದರೆ ಅರ್ಥವಿಲ್ಲ. ಮೊದಲು ವಿಶ್ವಶಾಂತಿಯ ಜಪವಾಗಬೇಕು. ಎಲ್ಲರೂ ನೆಮ್ಮದಿಯಿಂದ ಇರಬೇಕು ಎನ್ನುವ ಮನೋಭಾವ ಹೊಂದಬೇಕು ಎಂದರು.
ಇದೇ ವೇಳೆ ಶೆಟ್ಟಿಹಳ್ಳಿ ಜಪಮಾಲೆ ದೇವಸ್ಥಾನವನ್ನು ಐತಿಹಾಸಿಕ ಪಳೆಯುಳಿಕೆಗಳ ಪಟ್ಟಿಯಲ್ಲಿ ಸೇರಿಸಬೇಕು. ಇದನ್ನು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಮಾಡುವ ಬಗ್ಗೆ ಸರಕಾರ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಹಲವರನ್ನು ಹಾಗೂ ಶೆಟ್ಟಿಹಳ್ಳಿಯಲ್ಲಿ ಹುಟ್ಟಿ ಬೆಳೆದು ದೀಕ್ಷೆ ಸ್ವೀಕರಿಸಿದ ಸನ್ಯಾಸಿನಿಯರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆ ಕೆಥೋಲಿಕ್ ಕ್ರೈಸ್ತರ ಪ್ರಧಾನಗುರು ವಂದನೀಯ ಸ್ವಾಮಿ ರೊನಾಲ್ಡ್ ಕರ್ಡೋಜಾ, ಜಿಪಂ ಸದಸ್ಯರಾದ ಚಂಚಲಾ ಕುಮಾರಸ್ವಾಮಿ, ರಂಗಶೆಟ್ಟಿ, ಗ್ರಾಪಂ ಅಧ್ಯಕ್ಷೆ ಕಮಲಮ್ಮ ಮಂಜೇಗೌಡ, ಧರ್ಮಗುರುಗಳು ಹಾಗು ಭಗಿನಿಯರು ಉಪಸ್ಥಿತರಿದ್ದರು.
ಅಲ್ಫೋನ್ಸ್ ನಗರ ದೇವಾಲಯದ ಧರ್ಮಗುರು ಪಾ. ಡೇವಿಡ್‌ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಶೆಟ್ಟಿಹಳ್ಳಿ ಚರ್ಚ್‌ನ ಯಾಜಕ ಡೇವಿಡ್ ಅಂತೋಣಿ ವಂದಿಸಿದರು.