ಜಾನುವಾರುಗಳಿಗೆ ಸಾಲುತ್ತಿಲ್ಲ ಸರಕಾರದ ಮೇವು ಹೆಚ್ಚಿನ ವಿತರಣೆಗೆ ರೈತರ ಮನವಿ

Update: 2017-05-07 17:38 GMT

ಚಿಕ್ಕಮಗಳೂರು, ಮೇ 7: ಬರಗಾಲ ಪೀಡಿತ ಚಿಕ್ಕಮಗಳೂರು ಜಿಲ್ಲೆಯಲ್ಲಿ 4.84 ಲಕ್ಷ ಜಾನುವಾರುಗಳಿದ್ದು, ದಿನವೊಂದಕ್ಕೆ 12,287 ಟನ್ ಮೇವಿನ ಅಗತ್ಯವಿದೆ. ಈಗಾಗಲೇ ಸರಕಾರ ಕಡೂರಿನಲ್ಲಿ 10, ಚಿಕ್ಕಮಗಳೂರಿನಲ್ಲಿ 6 ಮೇವು ಕೇಂದ್ರಗಳನ್ನು ತೆರೆದು ಮೇವು ಪೂರೈಸುತ್ತಿದ್ದರೂ ಪ್ರಯೋಜವಾಗುತ್ತಿಲ್ಲ ಎನ್ನುವುದು ಹೈನುಗಾರಿಕೆ ಮಾಡುವ ರೈತರ ಆರೋಪವಾಗಿದೆ.


   ಸರಕಾರ ನೀಡುತ್ತಿರುವ ಮೇವು ಜಾನುವಾರುಗಳಿಗೆ ಸಾಲುತ್ತಿಲ್ಲ. 5 ಅಥವಾ 10 ಹಸುಗಳು ಸಾಕುತ್ತಿರುವ ರೈತರೇ ಹೆಚ್ಚಾಗಿರುವುದರಿಂದ ದಿನಕ್ಕೆ 5 ಕೆ.ಜಿ. ಮೇವು ಮಾತ್ರ ನೀಡಲಾಗುತ್ತಿದೆ. ಇದು ಸಾಕಾಗುತ್ತಿಲ್ಲ ಇನ್ನು ಹೆಚ್ಚಾಗಿ ವಿತರಣೆ ಮಾಡುವಂತೆ ರೈತಾಪಿ ವರ್ಗ ಸರಕಾರಕ್ಕೆ ಮನವಿ ಮಾಡುತ್ತಿದೆ.


ಜಿಲ್ಲಾಡಳಿತ ಸಮರ್ಪಕವಾಗಿ ಮೇವು ಪೂರೈಸಲು ಸಾಧ್ಯವಾಗದೆ ಶಿವಮೊಗ್ಗ, ಬಳ್ಳಾರಿ ಸೇರಿದಂತೆ ಇತರೇ ಭಾಗಗಳಿಂದ ಮೇವನ್ನು ಆಮದು ಮಾಡಿಕೊಳ್ಳುತ್ತಿದೆ. ಇದು ಆನೆ ಬಾಯಿಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಈ ನಡುವೆ ಗೋಶಾಲೆ ತೆರೆದು ಜಾನುವಾರುಗಳಿಗೆ ಜಿಲ್ಲಾಡಳಿತ ಹೇಗೆ ಮೇವು ಪೂರೈಸುತ್ತದೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ.


 ಗೋ ರಕ್ಷಣೆಯ ಬಿಜೆಪಿ, ಸ್ವಾತಂತ್ರ್ಯ ಹೋರಾಟದ ಕಾಂಗ್ರೆಸ್ ಪಕ್ಷ ಎಲ್ಲಿ ಎಂದು ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಹಸು ಸಾಗಾಟ ಮಾಡುವ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬರ ಪೀಡಿತ ಚಿಕ್ಕಮಗಳೂರು ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಒಣ ಹುಲ್ಲು ಸಹಿತ ಜಾನುವಾರುಗಳ ಮೇವು ಕಳುಹಿಸುವುದನ್ನು ನಿಷೇಧಿಸಲಾಗಿದೆ. ಆದರೆ ಕೆಲ ಹುಲ್ಲು ಮಾರಾಟಗಾರರು ರಾಷ್ಟ್ರೀಯ ಹೆದ್ದಾರಿಗಳಲ್ಲಿಯೇ ರಾಜಾರೋಷವಾಗಿ ಒಣ ಹುಲ್ಲುಗಳನ್ನು ಲಾರಿಗಳ ಮೂಲಕ ಮಂಗಳೂರು, ಶಿವಮೊಗ್ಗ ಭಾಗಕ್ಕೆ ಕೊಂಡೊಯ್ಯುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಚಕಾರ ಎತ್ತದೆ ಕುಳಿತುಕೊಂಡಿರುವುದು ಆತಂಕದಾಯಕವಾಗಿದೆ.
 
ಒಂದು ಕಡೆ ಜಾನುವಾರುಗಳಿಗೆ ಮೇವು ವಿತರಿಸಲು ಸರಕಾರ ಮೀನಾಮೇಷ ಎಣಿಸುತ್ತಿದೆ ಎನ್ನುವ ಆರೋಪವಿದೆ. ಇನ್ನೊಂದು ಕಡೆ ಇರುವ ಮೇವು ಪೂರೈಕೆಯಲ್ಲೂ ಜನಪ್ರತಿನಿಧಿಗಳು ರಾಜಕೀಯ ಮಾಡುತ್ತಿರುವ ದೂರುಗಳಿವೆ. ಸರಕಾರದ ಬೇಜವಾಬ್ದಾರಿತನ, ರಾಜಕಾರಣಿಗಳ ಕಣ್ಣಾಮುಚ್ಚಾಲೆ ಆಟದಿಂದ ಪರದಾಡುತ್ತಿರುವುದು ಮಾತ್ರ ರೈತಾಪಿ ವರ್ಗ ಎನ್ನುವುದು ಸತ್ಯ.


ಇನ್ನಾದರೂ ಚುನಾಯಿತ ಜನಪ್ರತಿನಿಧಿಗಳು, ರಾಜಕಾರಣಿಗಳು ಹಾಗೂ ಅಧಿಕಾರಿಗಳ ವರ್ಗ ಮೂಕಪ್ರಾಣಿಗಳ ಮೇವು ಹಂಚಿಕೆಯಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಲಿ. ಸಮರ್ಪಕ ರೀತಿಯಲ್ಲಿ ಮೇವು ಪೂರೈಕೆಯತ್ತ ಗಮನಹರಿಸಲಿ ಎನನುವುದು ರೈತ ಸಮುದಾಯದ ಅಭಿಲಾಷೆಯಾಗಿದೆ.


ಜಾನುವಾರುಗಳಿಗೆ ಮೇವು ಪೂರೈಕೆಯಲ್ಲೂ ಜಿಪಂ, ತಾಪಂ ಸದಸ್ಯರ ಹಸ್ತಕ್ಷೇಪ ತೀವ್ರವಾಗಿದೆ. ಕೆಲವು ಕ್ಷೇತ್ರಗಳಲ್ಲಿ ಯಾವ ಪಕ್ಷದ ಜನನಾಯಕರಿದ್ದಾರೋ ಅವರು ತಮಗೆ ಬೇಕಾದವರಿಗೆ ಹೆಚ್ಚಿನ ಮೇವು ಪೂರೈಕೆಯಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಮೇವು ಪೂರೈಕೆಯಲ್ಲಿ ರಾಜಕೀಯ ಮಾಡುತ್ತಿರುವ ರಾಜಕಾರಣಿಗಳು ಗೋಮುಖ ವ್ಯಾಘ್ರರು.

ಈಗಾಗಲೇ ಭೀಕರ ಬರದಿಂದ ಜಾನುವಾರುಗಳು ಮೇವು-ನೀರಿಲ್ಲದೆ ಸಾಯುತ್ತಿವೆ. ಸರಕಾರ ಮೇವು ಪೂರೈಕೆಯಲ್ಲೂ ಮೀನಮೇಷ ಎಣಿಸದೇ ಅಗತ್ಯಕ್ಕೆ ತಕ್ಕಂತೆ ಮೇವು ಪೂರೈಕೆ ಮಾಡಲಿ.
 ಗುರುಶಾಂತಪ್ಪ, ರೈತ ಮುಖಂಡರು

Writer - ಅಝೀಝ್ ಕಿರುಗುಂದ

contributor

Editor - ಅಝೀಝ್ ಕಿರುಗುಂದ

contributor

Similar News