×
Ad

ಅಭಿನಂದನಾ ಗ್ರಂಥ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವ ಹೊತ್ತಗೆ: ಡಾ. ನಾ.ಡಿಸೋಜ

Update: 2017-05-07 23:59 IST

ಸಾಗರ, ಮೇ 7: ಅಭಿನಂದನಾ ಗ್ರಂಥ ಎನ್ನುವುದು ಕೇವಲ ಒಂದು ಪುಸ್ತಕವಲ್ಲ. ಗ್ರಂಥದಲ್ಲಿ ಚಿತ್ರಿತವಾಗಿರುವ ವ್ಯಕ್ತಿಯನ್ನು ಮುಟ್ಟುವ ಜೊತೆಗೆ ಅವನ ಸಮಗ್ರ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವ ಹೊತ್ತಗೆಯಾಗಿರುತ್ತದೆ ಎಂದು ಸಾಹಿತಿ ಡಾ. ನಾ.ಡಿಸೋಜ ಹೇಳಿದರು.

ಇಲ್ಲಿನ ಅಜಿತ ಸಭಾಭವನದಲ್ಲಿ ಅಭಿನಂದನಾ ಸಮಿತಿ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಸಮಾಜಮುಖಿ ಮತ್ತಿಕೊಪ್ಪ ರಘುಪತಿರಾವ್ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಹಕಾರಿ ಧುರೀಣ ಹರನಾಥರಾವ್ ಮತ್ತಿಕೊಪ್ಪ ಮಾತನಾಡಿ, ರಘುಪತಿರಾವ್ ಶಿಕ್ಷಕರಾಗಿ, ಸಹಕಾರಿ ಧುರೀಣರಾಗಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲಾ ಸಣ್ಣ ಕೈಗಾರಿಕೆಗಳನ್ನು ಒಟ್ಟುಗೂಡಿಸಿ, ಕೈಗಾರಿಕಾ ಸಹಕಾರಿ ಬ್ಯಾಂಕ್ ಸ್ಥಾಪಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಪಿಎಲ್‌ಡಿಬಿ, ಮ್ಯಾಮ್ಕೋಸ್ ಸೇರಿದಂತೆ ಅನೇಕ ಸಹಕಾರಿ ಸಂಸ್ಥೆಗಳಲ್ಲಿ ಇವರು ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಎಲ್ಲಿ ಒಳ್ಳೆಯ ಕೆಲಸ ನಡೆಯುತ್ತದೆಯೋ ಅಲ್ಲಿ ರಘುಪತಿರಾವ್ ಹಾಜರಿದ್ದು, ಸಹಾಯ ಕೇಳದೆ ಇದ್ದರೂ ಶಕ್ತಿಮೀರಿ ಸಹಕಾರ ನೀಡುವ ದೊಡ್ಡಗುಣ ಅವರಲ್ಲಿದೆ ಎಂದರು.

ನಂತರ ರಘುಪತಿರಾವ್ ಹಾಗೂ ಜಯಲಕ್ಷ್ಮೀ ದಂಪತಿಯನ್ನು ಡಾ. ನಳಿನಿ ಹಾಗೂ ಡಾ. ರಾಮಚಂದ್ರ ಭಾಗವತ್ ದಂಪತಿ ಸನ್ಮಾನಿಸಿದರು. ಮಂಕುತಿಮ್ಮನ ಕಗ್ಗ ಕುರಿತು ಜಿ.ಎಸ್.ನಟೇಶ್ ಉಪನ್ಯಾಸ ನೀಡಿದರು.

ಕಸಾಪ ಅಧ್ಯಕ್ಷ ಹಿತಕರ ಜೈನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಭಿನಂದನಾ ಗ್ರಂಥದ ಸಂಪಾದಕ ವಿ.ಗಣೇಶ್, ಹವ್ಯಕ ಸಾಗರ ಅಧ್ಯಕ್ಷ ಎಚ್.ಕೆ.ವೆಂಕಟೇಶ ಜೋಯ್ಸ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಮ.ಸ.ನಂಜುಂಡಸ್ವಾಮಿ ಹಾಜರಿದ್ದರು.

ಅವಿನಾಶ್ ವಿ.ಜಿ. ಪ್ರಾರ್ಥಿಸಿದರು. ಗಣಪತಿ ಎಸ್.ಎಂ. ಸ್ವಾಗತಿಸಿದರು. ದಿನೇಶ್‌ಕುಮಾರ್ ಜೋಷಿ ಪ್ರಾಸ್ತಾವಿಕ ಮಾತನಾಡಿದರು. ಗಜಾನನ ರೇವಣಕಟ್ಟಾ ಅಭಿನಂದನಾ ಪತ್ರ ವಾಚಿಸಿದರು. ಸುದರ್ಶನ್ ವಂದಿಸಿದರು. ಆಯಿಷಾ ಬಾನು ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News