ಹಕ್ಕಿಪಿಕ್ಕಿ ಸಮುದಾಯದಿಂದ ಅನಿರ್ದಿಷ್ಟಾವಧಿ ಧರಣಿ: ಗುಡಿಸಲು ತೆರವುಗೊಳಿಸುವವರೆಗೂ ಹೋರಾಟದ ಎಚ್ಚರಿಕೆ

Update: 2017-05-08 13:46 GMT

ಶಿವಮೊಗ್ಗ, ಮೇ 8: ತಾಲೂಕಿನ ವೀರಣ್ಣನ ಬೆನವಳ್ಳಿ ಗ್ರಾಮದಲ್ಲಿರುವ ಗೋಮಾಳ ಜಾಗದಲ್ಲಿ ನಾಲ್ಕು ಎಕರೆಯಷ್ಟು ಪ್ರದೇಶವನ್ನು ಹಕ್ಕಿಪಿಕ್ಕಿ ಸಮುದಾಯದವರಿಗೆ ಮೀಸಲಿರಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದ ನಂತರ ಉಂಟಾಗಿರುವ ಗೊಂದಲ ಸದ್ಯಕ್ಕೆ ಪರಿಹಾರವಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.

ಸೋಮವಾರದಿಂದ ಹಕ್ಕಿಪಿಕ್ಕಿ ಸಮುದಾಯದ ಒಂದು ಗುಂಪು ದಸಂಸದ ನೇತೃತ್ವದಲ್ಲಿ ನಗರದ ಜಿಪಂ ಕಚೇರಿಯ ಆವರಣದಲ್ಲಿ ಅನಿರ್ದಿಷ್ಟಾವದಿ ಧರಣಿ ನಡೆಸಲಾರಂಭಿಸಿದ್ದು, ಜಿಲ್ಲಾಡಳಿತ ಮಂಜೂರು ಮಾಡಿರುವ ಗೋಮಾಳ ಪ್ರದೇಶದಲ್ಲಿ ಹಾಕಿರುವ ಗುಡಿಸಲು ತೆರವುಗೊಳಿಸುವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದೆ. ಒಂದೆಡೆ ಧರಣಿ ನಡೆಸುತ್ತಿರುವವರು "ನಾವೇ ನಿಜವಾದ ಫಲಾನುಭವಿಗಳು" ಎಂದು ಹೇಳುತ್ತಿದ್ದರೆ, ಮತ್ತೊಂದೆಡೆ ಗೋಮಾಳ ಪ್ರದೇಶದಲ್ಲಿ ಗುಡಿಸಲು ಹಾಕಿಕೊಂಡಿರುವವರು "ಯಾವುದೇ ಕಾರಣಕ್ಕೂ ಗುಡಿಸಲು ತೆರವುಗೊಳಿಸುವುದಿಲ್ಲ. ನಾವೇ ನಿಜವಾದ ಫಲಾನುಭವಿಗಳು" ಎಂದು ಹೇಳುತ್ತಿದ್ದಾರೆ.

ಪ್ರಸ್ತುತ ಈ ಎರಡು ಗುಂಪುಗಳ ನಡುವೆ ನಡೆಯುತ್ತಿರುವ ಹಗ್ಗಜಗ್ಗಾಟವು ಜಿಲ್ಲಾಡಳಿತ ಹಾಗೂ ಜಿಪಂ ಆಡಳಿತಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ದಿನದಿಂದ ದಿನಕ್ಕೆ ಈ ಪ್ರಕರಣ ವಿಭಿನ್ನ ತಿರುವು ಪಡೆದುಕೊಳ್ಳಲಾರಂಭಿಸಿದೆ.

ಹೋರಾಟ: ವಸತಿರಹಿತ ಹಕ್ಕಿಪಿಕ್ಕಿ ಸಮುದಾಯದವರಿಗೆ ಸೂಕ್ತ ವಸತಿ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಹಲವು ಬಾರಿ ನಡೆಸಿದ ಹೋರಾಟದ ಫಲವಾಗಿ ವೀರಣ್ಣನ ಬೆನವಳ್ಳಿ ಗ್ರಾಮದಲ್ಲಿ ನಾಲ್ಕು ಎಕರೆ ಸರಕಾರಿ ಭೂಮಿಯನ್ನು ಜಿಲ್ಲಾಡಳಿತ ವಸತಿ ಉದ್ದೇಶಕ್ಕೆ ಮಂಜೂರು ಮಾಡಿದೆ. ದಾಖಲೆಗಳನ್ನು ಆಯನೂರು ಗ್ರಾಪಂಗೆ ಹಸ್ತಾಂತರಿಸಿದೆ. ಆದರೆ ಇಲ್ಲಿಯವರೆಗೂ ಗ್ರಾಪಂ ಆಡಳಿತ ಹಕ್ಕಿಪಿಕ್ಕಿ ಸಮುದಾಯದವರಿಗೆ ಮಂಜೂರು ಮಾಡಿರುವ ಪ್ರದೇಶದಲ್ಲಿರುವ ನೀಲಗಿರಿ ಮರಗಳನ್ನು ಕಟಾವು ಮಾಡಿಲ್ಲ. ಹಾಗೆಯೇ ಲೇಔಟ್ ರಚನೆ ಸೇರಿದಂತೆ ನಿವೇಶನ ರಚನೆಯ ಯಾವುದೇ ಪ್ರಕ್ರಿಯೆಯಗಳನ್ನು ಆರಂಭಿಸಿಲ್ಲ. ಈ ನಡುವೆ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರದ ಕೆಲವರು ಅನಧಿಕೃತವಾಗಿ ಜೋಪಡಿ, ಟೆಂಟ್‌ಗಳನ್ನು ಹಾಕಿಕೊಂಡಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ.

ಈ ಸಂದರ್ಭ ಸಂಘಟನೆಯ ಮುಖಂಡರಾದ ಎಂ.ಗುರುಮೂರ್ತಿ, ಟಿ.ಎಚ್.ಹಾಲೇಶಪ್ಪ, ಹರಿಗೆ ರವಿ ಸೇರಿದಂತೆ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News