ಹೇಮಾವತಿ ನಾಲೆಗಳ ಆಧುನೀಕರಣ: ಸಿದ್ದರಾಮಯ್ಯ ಭರವಸೆ
ಮಂಡ್ಯ, ಮೇ 8: ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಅನುಕೂಲವಾಗುವಂತೆ ಹೇಮಾವತಿ ಜಲಾಶಯ ನಾಲೆಗಳ ಆಧುನೀಕರಣಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ತಾಲೂಕಿನ ಕೋಡಿಕೊಪ್ಪಲು ಗ್ರಾಮದ ಬಳಿ ಜೀರ್ಣೋದ್ಧಾರಗೊಂಡ ಬೀರೇಶ್ವರ ಚನ್ನಕೇಶ್ವರಸ್ವಾಮಿ ದೇವಾಲಯ ಹಾಗೂ ನೂತನ ವಿಮಾನಗೋಪುರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶಾಸಕ ಅಂಬರೀಶ್ ಕೋರಿಕೆಗೂ ಸಮ್ಮತಿಸಿದ ಸಿದ್ದರಾಮಯ್ಯ, ಮಂಡ್ಯ ವಿಧಾನಸಬಾ ಕ್ಷೇತ್ರದ 196 ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಗೆ ಅಗತ್ಯವಿರುವ ಅನುದಾನವನ್ನು ನೀಡುವುದಾಗಿ ಪ್ರಕಟಿಸಿದರು.
ಕೆಆರ್‌ಎಸ್ ಜಲಾಶಯದ ಹೆಚ್ಚುವರಿ ನೀರನ್ನು ಮಾರ್ಕೋನಹಳ್ಳಿ ಜಲಾಶಯದ ಮೂಲಕ ರಾಮನಗರ, ಚನ್ನಪಟ್ಟಣ, ಮದ್ದೂರು, ನಾಗಮಂಗಲ ಕೆರೆಗಳಿಗೆ ತುಂಬಿಸುವ ಯೋಜನೆಯನ್ನು ಸಾಧಕ ಬಾಧಕ ಪರಿಶೀಲಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು.
ಸರಕಾರ ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ ವಾರದಲ್ಲಿ 5 ದಿನ ಶಾಲಾ ಮಕ್ಕಳಿಗೆ ಹಾಲು ನೀಡಲಾಗುತ್ತಿದೆ. ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹ ಧನದಿಂದ ಪಶುಪಾಲಕರಿಗೆ ಅನುಕೂಲವಾಗಿದೆ. ನೀರಾವರಿ ಯೋಜನೆಗೆ ಆದ್ಯತೆ ನೀಡಲಾಗಿದೆ. ಪ್ರತಿವರ್ಷ ಇದಕ್ಕಾಗಿ 10 ಸಾವಿರ ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ಕೃಷ್ಣ ಮೇಲ್ದಂಡೆ ಯೋಜನೆ ಸೇರಿದಂತೆ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ವಿವರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಮಾತನಾಡಿ, ಮೈಷುಗರ್ ಆರಂಭಕ್ಕೆ ಕ್ರಮವಹಿಸಲಾಗಿದ್ದು, ಜೂನ್‌ನಲ್ಲಿ ಕಾರ್ಖಾನೆ ಆರಂಗೊಳ್ಳಲಿದೆ. ಸುಮಾರು 2.50 ಲಕ್ಷ ಕಬ್ಬು ಅರೆಯುವ ಯೋಜನೆ ಇದೆ ಎಂದರು.
ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ, ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಬೆಂಗಳೂರು ಮಾಜಿ ಮೇಯರ್ ಹುಚ್ಚಪ್ಪ, ಮಾಜಿ ನಗರಪಾಲಿಕೆ ಸದಸ್ಯ ಸೋಮಶೇಖರ್, ದಡದಪುರ ಶಿವಣ್ಣ, ಗಣಿಗರವಿಕುಮಾರ್, ಸಿದ್ದಾರೂಢ ಸತೀಶ್‌ಗೌಡ. ಇತರ ಮುಖಂಡರು ಉಪಸ್ಥಿತರಿದ್ದರು.