71.68 ಕೋ.ರೂ. ಕ್ರಿಯಾ ಯೋಜನೆಗೆ ಅನುಮೋದನೆ
ಶಿವಮೊಗ್ಗ, ಮೇ7: ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷೆ ಡಿ.ಆರ್.ರೇಖಾ ಉಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಇಲಾಖೆಯ ಅಧೀನದ ಐದು ಇಲಾಖೆಗಳಿಗೆ ಸಂಬಂಧಿಸಿದಂತೆ 71.68 ಕೋಟಿ ರೂ. ಮೊತ್ತದ ಕ್ರಿಯಾಯೋಜನೆಗೆ ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಸದಸ್ಯ ಕಲಗೋಡು ರತ್ನಾಕರ್, ಪರಿಶಿಷ್ಟ ಜಾತಿ ಹಾಗೂ ಪಂಗಡ, ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಸರಕಾರ ಬಿಡುಗಡೆ ಮಾಡುವ ಅನುದಾನದ ಪರಿಣಾಮಕಾರಿ ಸದ್ಬಳಕೆಯಾಗಬೇಕು. ಯಾವುದೇ ಕಾರಣಕ್ಕೂ ಅನುದಾನ ಬಳಕೆಯಾಗದೆ ಹಿಂದಿರುಗಬಾರದು. ಶೇ. 100 ರಷ್ಟು ಗುರಿ ಸಾಧನೆಯಾಗಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಗಮನಹರಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ ಹಲವು ಸರಕಾರಿ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರು ಲಭ್ಯವಾಗುತ್ತಿಲ್ಲ. ಎಂಬ ದೂರುಗಳು ಕೇಳಿಬಂದಿದ್ದು, ಬಿಸಿ ನೀರಿನ ವ್ಯವಸ್ಥೆ ಮಾಡುವಂತೆ ವಿದ್ಯಾರ್ಥಿಗಳು ಕೋರಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಎಲ್ಲ ಹಾಸ್ಟೆಲ್‌ಗಳಲ್ಲಿಯೂ ಬಿಸಿ ನೀರು ಲಭ್ಯವಾಗುವಂತೆ ಮಾಡಬೇಕು ಎಂದು ಸದಸ್ಯೆಯರಾದ ಆರುಂಧತಿ ಹಾಗೂ ಸೌಮ್ಯ ಬೋಜ್ಯನಾಯ್ಕೆ ಸಭೆಗೆ ಸೂಚಿಸಿದರು. ಶಿಕಾರಿಪುರ ತಾಲೂಕಿನ ವಿವಿಧ ಸ್ಥಳಗಳಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಮಂಜೂರಾತಿ ನೀಡಲು ಸರಕಾರ ಪ್ರಸ್ತಾವನೆ ಸಲ್ಲಿಸಲು, ಹೊಸನಗರ ಪಟ್ಟಣದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಕಟ್ಟಡಕ್ಕೆ ಬಾಡಿಗೆ ಪಾವತಿಸಲು ಅನುಮತಿ ನೀಡಲಾಯಿತು.
ಸಾಮಾಜಿಕ ನ್ಯಾಯ ಸಮಿತಿಗೆ ಒಳಪಡುವ ಇಲಾಖೆಗಳ 2016-17ನೆ ಸಾಲಿನ ಮಾರ್ಚ್ ಅಂತ್ಯದವರೆಗೆ ಸಾಧಿಸಲಾದ ಪ್ರಗತಿ ಪರಿಶೀಲನೆಯ ವಿವರವನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಭೆಯ ಮುಂದಿಟ್ಟರು. ಇಲಾಖೆಗಳ ವಿವಿಧ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಸದಸ್ಯರು ಚರ್ಚಿಸಿದರು.
ಸಭೆಯಲ್ಲಿ ಸಮಿತಿಯ ಸದಸ್ಯರಾದ ಜೆ.ಪಿ. ಯೋಗೇಶ್, ಕಲಗೋಡು ರತ್ನಾಕರ್, ಅನಿತಾ ಕುಮಾರಿ, ಸೌಮ್ಯ ಬೋಜ್ಯನ್ಕಾ, ಎಂ.ಸತೀಶ್, ಎನ್.ಆರ್. ಅರುಂಧತಿ, ಜಿ.ಪಂ. ಉಪ ಕಾರ್ಯದರ್ಶಿ ಮಣಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಅನುಮೋದಿತ ಕ್ರಿಯಾ ಯೋಜನೆಗಳು
ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ 2150.56 ಲಕ್ಷ ರೂ., ಹಿಂದುಳಿದ ವರ್ಗಗಳ ಇಲಾಖೆಯ 4504.77 ಲಕ್ಷ ರೂ., ಅಲ್ಪಸಂಖ್ಯಾತ ಇಲಾಖೆಯ 255.24 ಲಕ್ಷ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 99.55 ಲಕ್ಷ ರೂ. ಹಾಗೂ ಅಂಗವಿಕಲ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ 177 ಲಕ್ಷ ರೂ. ಮೊತ್ತದ ಕ್ರಿಯಾ ಯೋಜನೆಗೆ ಸಭೆ ಅನುಮೋದಿಸಿತು. ದುರ್ಬಳಕೆಯಾಗುತ್ತಿರುವ ಸ್ತ್ರೀಶಕ್ತಿ ಹಣಎಸ್ಸಿ-ಎಸ್ಟಿ ಕಾರ್ಪೊರೇಷನ್ ಮೂಲಕ ಸ್ತ್ರೀ ಶಕ್ತಿ ಸಂಘಗಳಿಗೆ ನೀಡಲಾಗುವ 1.50 ಲಕ್ಷ ರೂ. ಮೊತ್ತವು ಕೆಲವೆಡೆ ಮಧ್ಯವರ್ತಿಗಳ ಪಾಲಾಗುತ್ತಿದೆ. ಸ್ತ್ರೀಶಕ್ತಿ ಸಂಘಟನೆಗಳಿಗೆ ಪೂರ್ಣ ಮೊತ್ತ ತಲುಪುತ್ತಿಲ್ಲ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಅಲ್ಲದೆ, ಸಂಘಗಳಿಗೆ ನೀಡಲಾಗಿರುವ ಮೊತ್ತಗಳ ಬಗ್ಗೆ ಮಾಹಿತಿ ನೀಡುವಂತೆ ಸದಸ್ಯ ಎಂ. ಸತೀಶ್ ಸಂಬಂಧಿಸಿದ ಇಲಾಖೆಯ ಅಧಿಕಾರಿಗೆ ಸೂಚಿಸಿದರು.
ವೃದ್ಧಾಶ್ರಮಗಳಿಗೆ ಭೇಟಿ ನೀಡಿ
ಸರಕಾರದ ಸಹಾಯಧನ ಪಡೆದು ಕಾರ್ಯ ನಿರ್ವಹಿಸುತ್ತಿರುವ ಕೆಲ ವೃದ್ಧ್ದಾಶ್ರಮಗಳಲ್ಲಿ ನಿಗದಿತ ಪ್ರಮಾಣದಲ್ಲಿ ವೃದ್ಧರಿಲ್ಲ. ಸುಳ್ಳು ಅಂಕಿಅಂಶ ನೀಡಿ ಸರಕಾರದ ಸೌಲಭ್ಯ ಪಡೆಯಲಾಗುತ್ತಿದೆ ಎಂದು ಮಾಹಿತಿಗಳಿವೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ನಿರಂತರವಾಗಿ ವೃದ್ಧಾಶ್ರಮಗಳಿಗೆ ಭೇಟಿನೀಡಿ ಪರಿಶೀಲಿಸುತ್ತಿರಬೇಕು ಎಂದು ಸದಸ್ಯ ಎಚ್.ಸಿ.ಯೋಗೇಶ್ ಸಲಹೆ ನೀಡಿದ್ದಾರೆ.
ಮಹಿಳಾ ಹಾಸ್ಟೆಲ್‌ಗಳ ಭದ್ರತೆಗೆ ಸೂಚನೆ
ಸಾಗರ ಪಟ್ಟಣದ ಮಹಿಳಾ ಹಾಸ್ಟೆಲ್‌ವೊಂದರಲ್ಲಿ ಇತ್ತೀಚೆಗೆ ಕೆಲ ಕಿಡಿಗೇಡಿಗಳು ಮೊಬೈಲ್ ವೀಡಿಯೊ ಚಿತ್ರೀಕರಣ ಮಾಡಿದ ಆರೋಪವಿದೆ. ಈ ಹಾಸ್ಟೆಲ್ ಸೇರಿದಂತೆ ಎಲ್ಲಾ ಹಾಸ್ಟೆಲ್‌ಗಳಿಗೂ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು. ಹಾಸ್ಟೆಲ್‌ನ ಕಿಟಕಿಗಳು ಹಾಳಾಗಿದ್ದು, ದುರಸ್ತಿಗೆ ಕ್ರಮಕೈಗೊಳ್ಳ ಬೇಕೆಂದು ಸದಸ್ಯೆ ಅನಿತಾ ಕುಮಾರಿ ಅಧಿಕಾರಿಗಳಿಗೆ ಸೂಚಿಸಿದರು.