ನಕಲಿ ಗೋರಕ್ಷಕರ ಸಮಸ್ಯೆ ಮುಸ್ಲಿಮರದ್ದಲ್ಲ, ರೈತರದ್ದು

Update: 2017-05-08 18:40 GMT

‘ನೆರೆಮನೆಗೆ ಬಿದ್ದ ಬೆಂಕಿ ತನ್ನ ಮನೆಯನ್ನೂ ಸುಟ್ಟ ಬಳಿಕವೇ ತಣ್ಣಗಾಗುವುದು’ ಎನ್ನುವುದು ಟಾಲ್‌ಸ್ಟಾಯ್ ಕಥೆಯೊಂದರಲ್ಲಿ ಬರುವ ಸಾಲು. ದೇಶಾದ್ಯಂತ ಪಿಡುಗಾಗಿ ಪರಿಣಮಿಸಿರುವ ಗೋರಕ್ಷಕ ಪಡೆ, ಈ ದೇಶದ ಮುಸ್ಲಿಮರ ಸಮಸ್ಯೆಯೆಂದು ಬಿಂಬಿಸಲಾಗುತ್ತಿದೆಯಾದರೂ, ಅದು ನಿಧಾನಕ್ಕೆ ಮುಸ್ಲಿಮೇತರರನ್ನೂ ಗುರಿಯಾಗಿಸಿಕೊಂಡು ಇತ್ತೀಚಿನ ದಿನಗಳಲ್ಲಿ ವಿಸ್ತರಿಸಿಕೊಳ್ಳುತ್ತಿದೆ. ಗೋರಕ್ಷಕ ಪಡೆ ಹುಟ್ಟಿಕೊಂಡಿದ್ದು ರಾಜಕೀಯ ಕಾರಣಕ್ಕಾಗಿ ಮತ್ತು ದೇಶದಲ್ಲಿ ರಾಮನ ಹೆಸರಲ್ಲಿ ದ್ವೇಷ ಹರಡುವ ಕಾರ್ಯತಂತ್ರದ ಬಳಿಕ ದ್ವೇಷ ಹರಡಲು ಆಯ್ದುಕೊಂಡ ಇನ್ನೊಂದು ಹೆಸರು ಗೋವು.

ಈ ದೇಶದಲ್ಲಿ ಗೋವನ್ನು ಉಳಿಸುವ ಯಾವ ಉದ್ದೇಶವೂ ಅವರಲ್ಲಿಲ್ಲ. ಯಾಕೆಂದರೆ ಮುಖ್ಯವಾಗಿ ಗೋವುಗಳನ್ನು ಸಾಕುವ ಯಾವ ರೈತರೂ ಅಧಿಕೃತವಾಗಿ ತಮ್ಮ ಗೋವುಗಳಿಗೆ ಆಪತ್ತು ಒದಗಿರುವ ಕುರಿತಂತೆ ಸಾರ್ವಜನಿಕವಾಗಿ ದೂರಿಕೊಂಡ ಉದಾಹರಣೆ ಈ ದೇಶದಲ್ಲಿ ಇಲ್ಲ. ಯಾವ ರೈತನೂ ಕಾನೂನಿನ ಮೊರೆಯನ್ನೂ ಹೋಗಿಲ್ಲ. ಗೋರಕ್ಷಣೆ ಮಾಡುವ ತಂಡದಲ್ಲಿರುವ ಬಹುತೇಕರು ಕ್ರಿಮಿನಲ್ ಹಿನ್ನೆಲೆ ಹೊಂದಿದವರು. ಅವರ ಗುರಿ, ಗೋಸಾಗಾಟ ಮಾಡುವ ಮುಸ್ಲಿಮರ ಮೇಲೆ ಹಲ್ಲೆ ನಡೆಸಿ ಸಮಾಜದಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸುವುದು.

ಗೋವಿನ ಹೆಸರಲ್ಲಿ ಮನುಷ್ಯ ಹೃದಯವನ್ನು ಒಡೆಯುವುದು. ದಶಕದ ಹಿಂದೆ ಗೋವಿನ ಹೆಸರಲ್ಲಿ ಹಲ್ಲೆಗೊಳಗಾಗುತ್ತಿರುವವರಲ್ಲಿ ಮುಸ್ಲಿಮರೇ ಅಧಿಕವಿದ್ದರು. ಆಕಸ್ಮಿಕವಾಗಿ ಮುಸ್ಲಿಮೇತರರು ಈ ದಾಳಿಗೆ ಬಲಿಯಾಗುತ್ತಿದ್ದರು. ಆದರೆ ಇಂತಹ ದಾಳಿ ಒಂದು ಲಾಭದಾಯಕ ದಂಧೆಯೂ ಹೌದು ಎನ್ನುವುದನ್ನು ಮನವರಿಕೆ ಮಾಡಿಕೊಂಡ ಬಳಿಕ, ಗೋ ರಕ್ಷಣೆ ತನ್ನ ಸ್ವರೂಪವನ್ನು ಸ್ವರೂಪವನ್ನು ಇನ್ನಷ್ಟು ವಿಸ್ತರಿಸಿದೆ. ಪರಿಣಾಮವಾಗಿ ಇಂದು ಈ ದಾಳಿಗೆ ಕೇವಲ ಮುಸ್ಲಿಮರಷ್ಟೇ ಅಲ್ಲದೆ ಇತರ ಸಮುದಾಯದ ಜನರೂ ಬಲಿಯಾಗುತ್ತಿದ್ದಾರೆ. ಇಂದು ಗೋರಕ್ಷಕರ ಕಾಟಕ್ಕೆ ದೇಶದ ರೈತ ಸಮುದಾಯ ಬಲಿಯಾಗುತ್ತಿದೆ. ಗೋರಕ್ಷಕರು ಮತ್ತು ಮುಸ್ಲಿಮರು ಎನ್ನುವ ಮಾತುಗಳು ಬದಿಗೆ ಸರಿದು ಇದೀಗ ಗೋರಕ್ಷಕರು ಮತ್ತು ರೈತರು ಎನ್ನುವ ಚರ್ಚೆ ಮುನ್ನೆಲೆಗೆ ಬರುತ್ತಿದೆ. ರಾಷ್ಟ್ರ ರಾಜಧಾನಿಯ ಅವಳಿ ನಗರವಾದ ಗ್ರೇಟರ್ ನೋಯ್ಡಿದಲ್ಲಿ ನಡೆದ ಘಟನೆ, ಮುಂದಿನ ದಿನಗಳಲ್ಲಿ ಗೋರಕ್ಷಕರು ಹೇಗೆ ಇಡೀ ರೈತ ಸಮುದಾಯಕ್ಕೇ ಕಂಟಕವಾಗಲಿದ್ದಾರೆ ಎನ್ನುವುದನ್ನು ಹೇಳುತ್ತದೆ.

ಭೂಪ್‌ಸಿಂಗ್ (45) ಹಾಗೂ ಜಬರ್ ಸಿಂಗ್ (35) ಒಂದೇ ಕುಟುಂಬದ ರೈತರು ಗುರುವಾರ ಮಧ್ಯಾಹ್ನ ಮೆಹಂದಿಪುರ ಗ್ರಾಮದಿಂದ ಹಸು ಹಾಗೂ ಕರುವನ್ನು ಖರೀದಿಸಿ ತರುತ್ತಿದ್ದ ಸಂದರ್ಭದಲ್ಲಿ ಸ್ವಯಂಘೋಷಿತ ಗೋರಕ್ಷಕರ ತಂಡ ದಾಳಿ ಮಾಡಿದೆ. ಕಾರಣ ಕೂಡ ಹೇಳಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಭೀತಿಯಿಂದ ತತ್ತರಿಸಿದ ಆ ರೈತರು, ಗೋರಕ್ಷಕಲ್ಲಿ ಕುರಿತು ನಾವು ದನ ಕಳ್ಳಸಾಗಣೆದಾರರಲ್ಲ; ನಾವು ಹೈನುಗಾರಿಕೆ ರೈತರು. ನಾವು ಮುಸ್ಲಿಮರೂ ಅಲ್ಲ ಎಂದು ಪರಿಪರಿಯಾಗಿ ಬೇಡಿಕೊಂಡರು. ಅಷ್ಟಾಗಿಯೂ ಗೋರಕ್ಷಕರು ಅವರನ್ನು ಮನಸೋ ಇಚ್ಛೆ ಥಳಿಸಿದ್ದಾರೆ. ಬಳಿಕ ಸ್ಥಳೀಯ ಪೊಲೀಸ್ ಠಾಣೆಗೆ ಒಯ್ದರು. ಭೂಪ್‌ಸಿಂಗ್ ಪೊಲೀಸರಿಗೆ ನೀಡಿರುವ ಹೇಳಿಕೆ ಪ್ರಕಾರ, ಯಾವುದೇ ಕಾರಣವಿಲ್ಲದೆ ಗೋರಕ್ಷಕರ ತಂಡ ನಮ್ಮನ್ನು ಥಳಿಸಿದೆ. ಉಡುಪಿಯಲ್ಲಿ ಓರ್ವ ದನದ ವ್ಯಾಪಾರಿ ಮತ್ತು ಮತ್ತು ಗೋಸಾಗಣೆಗಾರನನ್ನು ಸಂಘಪರಿವಾರ ಇದೇ ರೀತಿ ಥಳಿಸಿಕೊಂದಿತು.

 ಹೈನುಗಾರಿಕೆಯನ್ನೇ ಬದುಕಿನ ಮುಖ್ಯ ಕಸುಬಾಗಿಸಿಕೊಂಡಿದ್ದ ಪೆಹ್ಲೂಖಾನ್‌ರ ಹತ್ಯೆಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಪೆಹ್ಲೂಖಾನ್ ಈ ದೇಶದ ಹೈನುಗಾರಿಕೆ ನಡೆಸುವ ರೈತನನ್ನು ಪ್ರತಿನಿಧಿಸುತ್ತಾರೆಯೇ ಹೊರತು, ಅವರ ಧರ್ಮವನ್ನಲ್ಲ. ಪೆಹ್ಲೂಖಾನ್‌ನ ಕುಟುಂಬ ತಲೆತಲಾಂತರಗಳಿಂದ ದನ ಸಾಕುತ್ತಾ ಬರುತ್ತಿದೆ. ಗೋರಕ್ಷಕರು ಥಳಿಸಿ ಕೊಂದಿರುವುದು ಒಬ್ಬ ರೈತನನ್ನು. ಇದೀಗ ದನ ಸಾಕುವುದನ್ನು ನಿಲ್ಲಿಸಬೇಕಾದಂತಹ ಸನ್ನಿವೇಶದಲ್ಲಿ ನಿಂತಿದೆ ಆ ಕುಟುಂಬ. ಗೋರಕ್ಷಕರು ಹೇಗೆ ತಮ್ಮ ಮಾಫಿಯಾದ ಮೂಲಕ ಈ ದೇಶದ ಹೈನುಗಾರಿಕೆಗೇ ಮುಳುವಾಗುತ್ತಿದ್ದಾರೆ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಹೈನೋದ್ಯಮ ಎಂದರೆ ಗೋವಿಗೆ ಹೂವಿನ ಹಾರಹಾಕಿ ಪೂಜಿಸುವುದಲ್ಲ.

ಅದು ಕೇವಲ ಹಾಲು ಮೊಸರಿನ ಉದ್ಯಮಕ್ಕೆ ಸೀಮಿತವಾಗಿರುವುದೂ ಅಲ್ಲ. ಗೋಸಾಕಣೆಯ ಅರ್ಥವ್ಯವಸ್ಥೆ ಹಲವು ಉತ್ಪನ್ನಗಳ ಸರಪಣಿಯಿಂದ ಪೋಷಣೆಗೊಂಡಿದೆ. ಗೋವು ಸಾಕುವುದು ವೆಚ್ಚದಾಯಕ. ಅದೊಂದು ಉದ್ಯಮವಾಗಿರುವುದರಿಂದ ಲಾಭನಷ್ಟಗಳ ಆಧಾರದ ಮೇಲೆ ಗೋ ಸಾಕಣೆ ನಿಂತಿದೆ. ಹಾಲು ಕುಡಿಯುವವರು, ಬೆಣ್ಣೆ ತಿನ್ನುವವರು, ತುಪ್ಪ ತಿನ್ನುವವರು, ಮಾಂಸ ತಿನ್ನುವವರು, ಚರ್ಮ ಉದ್ಯಮಿಗಳು ಎಲ್ಲರೂ ಈ ಉದ್ಯಮದ ಭಾಗವೇ ಆಗಿದ್ದಾರೆ. ಇವರೆಲ್ಲ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದವರು ಖಂಡಿತ ಅಲ್ಲ. ಗೋಮಾಂಸ ಸೇವನೆ ಗೋ ಉದ್ಯಮದ ಬಹುಮುಖ್ಯ ಅಂಗ. ರೈತರ ಸಾಕುವ ವೆಚ್ಚವನ್ನು ಭರಿಸುವ ವಿಭಾಗ ಇವರು. ಇವರಿಗೆ ಯಾವುದೇ ಧರ್ಮವಿಲ್ಲ. ಗೋಮಾಂಸ ಸೇವಿಸುವವರು ಕೇವಲ ಮುಸ್ಲಿಮರೇ ಆಗಿದ್ದರೆ, ಈಶಾನ್ಯ ಭಾರತ, ಗೋವಾ ಮತ್ತು ಕೇರಳದಲ್ಲಿ ಗೋಮಾಂಸ ಸೇವನೆಯ ವಿರುದ್ಧ ಬಿಜೆಪಿ ಹೇಳಿಕೆಗಳನ್ನು ನೀಡಬೇಕಾಗಿತ್ತು. ಆದರೆ ಈ ರಾಜ್ಯಗಳಲ್ಲಿ ಬಿಜೆಪಿ ಗೋಮಾಂಸದ ಪರವಾಗಿದೆ. ಅಂದರೆ ಬಿಜೆಪಿಗೂ ಈ ಸತ್ಯಗೊತ್ತಿದೆ. ಗೋರಕ್ಷಕರ ಕಾಟ ಮತ್ತು ಗೋಮಾಂಸ ಸೇವನೆ ನಿಷೇಧದಿಂದಾಗಿ ಗೋವಿನ ಸಾಕಣೆ ದುಬಾರಿಯಾಗುತ್ತಿದೆ. ಇದರಿಂದಾಗಿ ದೇಶದ ದೊಡ್ಡ ಸಂಖ್ಯೆಯ ರೈತರು ಗೋಸಾಕಣೆಯಿಂದ ಹಿಂದೆ ಸರಿಯುತ್ತಿದ್ದಾರೆ.

ಕಳೆದ ಒಂದು ದಶಕದಲ್ಲಿ ಶೇ. 30ರಷ್ಟು ರೈತರು ತಮ್ಮ ವೃತ್ತಿಯಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ ಗೋವುಗಳ ಸಂಖ್ಯೆಯಲ್ಲಿ ಇಳಿಮುಖ ಕಂಡು ಬರುತ್ತಿದೆ. ಗೋಉದ್ಯಮವನ್ನು ಬೇರೆ ಬೇರೆ ನೆಲೆಯಲ್ಲಿ ಬಲವಾಗಿ ಅವಲಂಬಿಸಿರುವ ಉತ್ತರಪ್ರದೇಶದಲ್ಲಿ ಇದರ ಪರಿಣಾಮ ತೀವ್ರವಾಗಿ ಕಂಡು ಬರುತ್ತಿದೆ. ಚರ್ಮದ ಉದ್ಯಮಗಳಲ್ಲಿ ಕುಸಿತ ಕಾಣುತ್ತಿದೆ. ಗೋಹತ್ಯೆ ನಿಷೇಧದ ಕಾರಣದಿಂದ, ಕಸಾಯಿಖಾನೆಗಳಿಗೆ ಬೀಗ ಬೀಳುತ್ತಿವೆ. ಇತರ ಕೋಳಿ, ಕುರಿ ಮಾಂಸಗಳ ದರ ಏರುತ್ತಿದೆ. ಒಟ್ಟಿನಲ್ಲಿ ದೇಶದ ಅರ್ಥವ್ಯವಸ್ಥೆಯೇ ಏರು ಪೇರಾಗಿದೆ. ಈ ಎಲ್ಲ ಕಾರಣಗಳಿಂದ ಇಂದು ಗೋರಕ್ಷಕರು ದೇಶದ ಅರ್ಥವ್ಯವಸ್ಥೆಯ ವಿರುದ್ಧ ಇದ್ದಾರೆ ಎನ್ನುವುದನ್ನು ನಾವು ಅರ್ಥ ಮಾಡಿಕೊಂಡು ಅವರ ವಿರುದ್ಧ ಒಂದಾಗಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News