ಮಡಿಕೇರಿ : ನಗರೋತ್ಥಾನದ 3 ನೇ ಹಂತದ ಅನುದಾನ
ಮಡಿಕೇರಿ, ಮೇ 9 : ನಗರೋತ್ಥಾನದ 3 ನೇ ಹಂತದ ಕಾಮಗಾರಿಗಾಗಿ 35 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಕುಡಿಯುವ ನೀರಿಗಾಗಿ 15 ಕೋಟಿ ರೂ. ಗೆ ಬದಲಾಗಿ 10 ಕೋಟಿ ರೂ. ಮಾತ್ರ ಮೀಸಲಿಟ್ಟರೆ ಸಾಕು ಎಂದು ನಗರಸಭೆಯ ವಿಶೇಷ ಸಭೆ ನಿರ್ಣಯ ಕೈಗೊಂಡಿದೆ.
ನಗರೋತ್ಥಾನದ 3 ನೇ ಹಂತದ ಅನುದಾನದ ಹಂಚಿಕೆ ಕುರಿತು ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು.
ಒಟ್ಟು 35 ಕೋಟಿ ರೂ.ಗಳಲ್ಲಿ 15 ಕೋಟಿ ರೂ.ಗಳನ್ನು ಕುಡಿಯುವ ನೀರಿನ ನಾಲ್ಕು ಟ್ಯಾಂಕ್‌ಗಳ ನಿರ್ಮಾಣಕ್ಕಾಗಿ ಮೀಸಲಿಟ್ಟ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳ ಕ್ರಮಕ್ಕೆ ಬಹುತೇಕ ಎಲ್ಲಾ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಎಸ್.ರಮೇಶ್ ಹಾಗೂ ಬಿಜೆಪಿ ಸದಸ್ಯರಾದ ಪಿ.ಡಿ.ಪೊನ್ನಪ್ಪ ಮಾತನಾಡಿ, ಎಲ್ಲಾ ಹಣವನ್ನು ಕುಡಿಯುವ ನೀರಿಗಾಗಿ ಮೀಸಲಿಟ್ಟರೆ ಉಳಿದ ಅಭಿವೃದ್ಧಿ ಕಾರ್ಯಗಳನ್ನು ಹೇಗೆ ಕೈಗೆತ್ತಿಕೊಳ್ಳುವುದೆಂದು ಪ್ರಶ್ನಿಸಿದರು.
ಮೂಡಾ ಅಧ್ಯಕ್ಷರಾದ ಚುಮ್ಮಿ ದೇವಯ್ಯ ಮಾತನಾಡಿ, ಕುಂಡಾಮೇಸ್ತ್ರಿ ಯೋಜನೆಯ ಪ್ರದೇಶದಲ್ಲಿ ಚೆಕ್ ಡ್ಯಾಮ್ ನಿರ್ಮಿಸದೆ ನಗರದಲ್ಲಿ ಟ್ಯಾಂಕ್‌ಗಳನ್ನು ನಿರ್ಮಿಸಿ ಏನು ಪ್ರಯೋಜನ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕುಂಡಾಮೇಸ್ತ್ರಿ ಯೋಜನೆಯನ್ನು ಪೂರ್ಣಗೊಳಿಸದೇ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಟ್ಯಾಂಕ್‌ಗಳ ನಿರ್ಮಾಣಕ್ಕಾಗಿ 15 ಕೋಟಿ ರೂ. ಮೀಸಲಿಟ್ಟ ಬಗ್ಗೆ ಸದಸ್ಯರು ಅಧಿಕಾರಿಗಳಿಂದ ಮಾಹಿತಿ ಬಯಸಿದರು.
ಈ ಸಂದರ್ಭ ಮಾತನಾಡಿದ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಭಿಯಂತರ ಆನಂದ್, ನಗರದ ಜನತೆಗೆ ದಿನದ 24 ಗಂಟೆಯೂ ಕುಡಿಯುವ ನೀರನ್ನು ಒದಗಿಸುವುದಕ್ಕಾಗಿ 24*7 ಯೋಜನೆಯಡಿ ಸುಮಾರು 75 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ. ಈ ಪ್ರಕಾರವಾಗಿ ಮೊದಲ ಹಂತದಲ್ಲಿ ನಗರದ ನಾಲ್ಕು ಭಾಗಗಳಲ್ಲಿ ನೀರು ಶೇಖರಣೆಗಾಗಿ ಬೃಹತ್ ಟ್ಯಾಂಕ್‌ಗಳನ್ನು ನಿರ್ಮಿಸಲು ರೂ.15 ಕೋಟಿ ಮೀಸಲಿಡಲಾಗಿದೆ ಎಂದರು.
ಮುಂದಿನ ಮೂವತ್ತು ವರ್ಷಗಳ ಜನಸಂಖ್ಯೆಯನ್ನು ಆಧರಿಸಿ ಕುಂಡಾಮೇಸ್ತ್ರಿ ಯೋಜನೆಯ ಮೋಟಾರ್‌ನ್ನು ಅಳವಡಿಸಲಾಗಿದೆ. ಮೋಟಾರ್‌ನಿಂದ ಪಂಪ್ ಆಗುವ ನೀರನ್ನು ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿಡಲೇಬೇಕಾಗಿದ್ದು, ಹಾಗೆ ಮಾಡಿದಾಗ ಮಾತ್ರ ನಗರದ ಜನತೆಗೆ 24 ಗಂಟೆಯೂ ಕುಡಿಯುವ ನೀರನ್ನು ಒದಗಿಸಲು ಸಾಧ್ಯವೆಂದು ಆನಂದ್ ವಿವರಿಸಿದರು.
ಟ್ಯಾಂಕ್ ನಿರ್ಮಾಣದ ನಂತರ ಪೈಪ್‌ಲೈನ್‌ಗಳನ್ನು ಅಳವಡಿಸುವ ಕಾರ್ಯ ಕೂಡ ಆಗಬೇಕಾಗಿದೆ. ರೂ.75 ಕೋಟಿಯ ಯೋಜನೆಗೆ ನಗರೋತ್ಥಾನದ 3 ನೇ ಹಂತದ ಅನುದಾನದಿಂದ 15 ಕೋಟಿ ರೂ.ಗಳನ್ನು ಪಡೆಯಲಾಗುತ್ತಿದೆ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು ಇಷ್ಟೊಂದು ಮೊತ್ತದ ಹಣವನ್ನು ಕುಡಿಯುವ ನೀರಿಗಾಗಿ ನೀಡಲು ಸಾಧ್ಯವಿಲ್ಲವೆಂದರು.
ಉಪಾಧ್ಯಕ್ಷರಾದ ಟಿ.ಎಸ್.ಪ್ರಕಾಶ್ ಮಾತನಾಡಿ, ಏಳು ವರ್ಷಗಳೇ ಕಳೆದರೂ ಕುಂಡಾಮೇಸ್ತ್ರಿ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಇನ್ನು 24 ಗಂಟೆಯೂ ಕುಡಿಯುವ ನೀರು ಹೇಗೆ ನೀಡುತ್ತೀರಿ ಎಂದು ಪ್ರಶ್ನಿಸಿದರು.
ಪಿ.ಡಿ.ಪೊನ್ನಪ್ಪ ಮಾತನಾಡಿ, ಜನರಿಗೆ ಬರೀ ನೀರು ಕುಡಿಸಿದರೆ ಸಾಲದು, ಇತರ ಅಭಿವೃದ್ಧಿ ಕಾರ್ಯಗಳು ಕೂಡ ನಡೆಯಬೇಕು. 24 ಗಂಟೆ ನೀರು ಒದಗಿಸುವ ಅಗತ್ಯತೆ ಸಧ್ಯಕ್ಕಿಲ್ಲದೆ ಇರುವುದರಿಂದ ನಾಲ್ಕು ಟ್ಯಾಂಕ್‌ಗಳಿಗೆ ಬದಲಾಗಿ ಮೂರು ಟ್ಯಾಂಕ್‌ಗಳ ನಿರ್ಮಾಣಕ್ಕೆ ಅನುದಾನವನ್ನು 10 ಕೋಟಿಗೆ ಸೀಮಿತಗೊಳಿಸಿ ಉಳಿದ ಹಣವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿಡಿ ಎಂದು ಸಲಹೆ ನೀಡಿದರು. ಕುಂಡಾಮೇಸ್ತ್ರಿಯಲ್ಲಿ ಚೆಕ್‌ಡ್ಯಾಂ ನಿರ್ಮಿಸದೆ ಟ್ಯಾಂಕ್‌ಗಳನ್ನು ಮಾತ್ರ ನಿರ್ಮಿಸುವುದು ಪೂಜೆ ಮಾಡುವುದಕ್ಕಾಗಿಯೇ ಎಂದು ಪ್ರಶ್ನಿಸಿದರು.
ಎಸ್‌ಡಿಪಿಐ ಸದಸ್ಯರು ಸೇರಿದಂತೆ ಅನೇಕರು ರೂ.10 ಕೋಟಿ ಅನುದಾನವನ್ನು ಮಾತ್ರ ಟ್ಯಾಂಕ್‌ಗಳ ನಿರ್ಮಾಣಕ್ಕೆ ಮೀಸಲಿಟ್ಟು ಯೋಜನೆ ರೂಪಿಸುವಂತೆ ಒತ್ತಾಯಿಸಿದರು.
ಜನಪ್ರತಿನಿಧಿಗಳು ಹೇಳಿದಂತೆ ಅಧಿಕಾರಿಗಳು ನಡೆದುಕೊಳ್ಳಬೇಕು, 10 ಕೋಟಿ ರೂ. ನೀಡುವ ಕುರಿತು ಸಭೆಯಲ್ಲಾದ ನಿರ್ಣಯವನ್ನು ಸರಕಾರಕ್ಕೆ ಕಳುಹಿಸಿ ಎಂದು ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಎಸ್.ರಮೇಶ್ ತಿಳಿಸಿದರು.
ಸರ್ವ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ಟ್ಯಾಂಕ್‌ಗಳ ನಿರ್ಮಾಣಕ್ಕೆ 10 ಕೋಟಿ ರೂ. ಮೀಸಲಿಟ್ಟು, ಯೋಜನೆಗೆ ಅಗತ್ಯವಿರುವ ಹೆಚ್ಚುವರಿ ಹಣವನ್ನು ಮುಂದಿನ ಅನುದಾನದಲ್ಲಿ ಕ್ರೋಢೀಕರಿಸಲು ವಿಶೇಷ ಸಭೆ ನಿರ್ಣಯ ಕೈಗೊಂಡಿತು.
ನೀರು ಸರಬರಾಜಿನಲ್ಲಿ ವ್ಯತ್ಯಯ
ನಗರದಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ನೌಕರರ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. ಇರುವ ನೌಕರರನ್ನು ಕೂಡ ಕೆಲಸದಿಂಂದ ವಜಾಗೊಳಿಸುವ ಪ್ರಸ್ತಾಪ ಸರಿಯಲ್ಲವೆಂದ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್.ರಮೇಶ್, ಅಭಿಯಂತರ ಶಿವಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನೀರು ಬಿಡಲು ನೌಕರರು ಇಲ್ಲದಿದ್ದರೆ ನಗರಸಭಾ ಸದಸ್ಯರು ನೀರು ಬಿಡಬೇಕೆ ಎಂದು ಪ್ರಶ್ನಿಸಿದರು. ಇದಕ್ಕೂ ಮೊದಲು ಮಾತನಾಡಿದ ರಮೇಶ್, ಚೆಸ್ಕಾಂ ಇಲಾಖೆ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಗುಂಡಿ ತೆಗೆದು ಕುಂಡಾಮೇಸ್ತ್ರಿಯ ಪೈಪ್ ಲೈನ್‌ನ್ನು ಒಡೆದು ಹಾಕಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಚಿಕ್ಕಪೇಟೆ ವಿಭಾಗಕ್ಕೆ ನೀರಿನ ಸಮಸ್ಯೆ ಎದುರಾಗಿದ್ದು, ಚೆಸ್ಕಾಂ ರಸ್ತೆಯನ್ನು ಅಗೆಯಲು ಅನುಮತಿ ಪಡೆದಿದೆಯೇ ಮತ್ತು ದಂಡ ಸಂಗ್ರಹಿಸಲಾಗಿದೆಯೇ ಎಂದು ಪ್ರಶ್ನಿಸಿದರು.
ಚೆಸ್ಕಾಂ ಇಲಾಖೆ ನಗರಸಭೆಗೆ ಅನುಮತಿಗಾಗಿ ಯಾವುದೇ ಪತ್ರವನ್ನು ನೀಡಿಲ್ಲವೆಂದು ಪೌರಾಯುಕ್ತರಾದ ಶುಭ ಸಭೆಯ ಗಮನ ಸೆಳೆೆದರು. ಗುಂಡಿ ತೆಗೆಯುವ ಕಾರ್ಯವನ್ನು ತಕ್ಷಣ ಸ್ಥಗಿತಗೊಳಿಸಿ, ದಂಡ ವಸೂಲಿ ಮಾಡಿದ ನಂತರ ಕಾಮಗಾರಿಗೆ ಅವಕಾಶ ನೀಡಬೇಕೆಂದು ರಮೇಶ್ ಒತ್ತಾಯಿಸಿದರು. ಸದಸ್ಯರಾದ ಮನ್ಸೂರ್ ಮಾತನಾಡಿ, ಯುಜಿಡಿ ಕಾಮಗಾರಿ ನಡೆಸದಂತೆ ಈ ಹಿಂದೆಯೆ ನಿರ್ಣಯವಾಗಿದ್ದರು ಕಾಮಗಾರಿ ಮುಂದುವರಿದಿದೆ. ಇದಕ್ಕೆಲ್ಲ ಯಾರು ಹೊಣೆ ಎಂದು ಪ್ರಶ್ನಿಸಿದರು.ಇದಕ್ಕೆ ಇತರ ಸದಸ್ಯರು ಕೂಡ ಧ್ವನಿಗೂಡಿಸಿ ಸಂಬಂಧಿಸಿದ ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡು ತಕ್ಷಣ ರಸ್ತೆ ಗುಂಡಿ ಮುಚ್ಚುವ ಕಾರ್ಯ ನಡೆಸುವಂತೆ ಒತ್ತಾಯಿಸಿದರು.
ಕಸ ವಿಲೇವಾರಿ ವಿಫಲ
ನಗರದಲ್ಲಿ ಕಸ ವಿಲೆೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲವೆಂದು ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ಮುಂದಾಲೋಚನೆ ಇಲ್ಲದೆ ನಗರದಲ್ಲಿದ್ದ ಕಂಟೈನರ್‌ಗಳನ್ನು ತೆಗೆಯಲಾಯಿತು. ಈಗ ಅಲ್ಲಲ್ಲಿ ಕಸದ ತೊಟ್ಟಿಗಳು ಕಂಡು ಬರುತ್ತಿದ್ದು, ಎಲ್ಲೆಂದರಲ್ಲಿ ತ್ಯಾಜ್ಯಗಳು ಬಿದ್ದುಕೊಂಡಿವೆ. ನಾಯಿ, ಬೆಕ್ಕುಗಳು ಕಸವನ್ನು ಕಂಡವರ ಮನೆಯ ಮುಂದೆ ಹಾಕುತ್ತಿವೆ. ನಗರಸಭೆೆ ಅವೈಜ್ಞಾನಿಕ ಕ್ರಮ ಕೈಗೊಂಡಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.
ಪೌರಾಯುಕ್ತರ ಮನೆ ಬಾಗಿಲಿಗೆ ಕಸ
ಸದಸ್ಯ ಉಣ್ಣಿಕೃಷ್ಣ ಮಾತನಾಡಿ, ಕಸ ಸಂಗ್ರಹಿಸುವ ಗಾಡಿಗಳು ಮನೆ ಬಾಗಿಲಿಗೆ ಸಕಾಲದಲ್ಲಿ ಬರುತ್ತಿಲ್ಲ. ಹೊಟೇಲ್, ಬಾರ್‌ಗಳ ತ್ಯಾಜ್ಯಗಳನ್ನು ಮಾತ್ರ ಸಂಗ್ರಹಿಸಲಾಗುತ್ತಿದ್ದು, ಎಲ್ಲಾ ಕಸದ ಗಾಡಿಗಳ ಗುತ್ತಿಗೆಯನ್ನು ಒಂದೇ ಮಹಿಳಾ ಸಂಘಕ್ಕೆ ನೀಡುವ ಬದಲು ಇತರರಿಗೂ ಟೆಂಡರ್ ಮೂಲಕ ನೀಡುವಂತೆ ಸಲಹೆ ನೀಡಿದರು. ಪ್ರತಿ ಬಡಾವಣೆಗಳಿಗೆ ಕಸದ ಗಾಡಿ ಬರುವ ಸಮಯವನ್ನು ನಿಗದಿ ಪಡಿಸಿ ಜನರಿಗೆ ತಿಳಿಸಬೇಕು. ಮುಂದಿನ ದಿನಗಳಲ್ಲಿ ಕಸವಿಲೇವಾರಿ ಸೂಕ್ತ ರೀತಿಯಲ್ಲಿ ನಡೆಯದಿದ್ದಲ್ಲಿ ಕಸದ ರಾಶಿಯನ್ನು ಪೌರಾಯುಕ್ತರ ಮನೆ ಮುಂದೆ ಸುರಿಯುವುದಾಗಿ ಎಚ್ಚರಿಕೆ ನಿಡಿದರು.
ಕಸ ವಿಲೇವಾರಿಯ ಸಂಪೂರ್ಣ ಜವಾಬ್ದಾರಿಯನ್ನು ತಮಗೆ ವಹಿಸಿದರೆ ಯಾವ ರೀತಿ ನಗರವನ್ನು ಶುಚಿಯಾಗಿಡಬೇಕೆನ್ನುವುದನ್ನು ತೋರಿಸಿಕೊಡುವುದಾಗಿ ಉಣ್ಣಿಕೃಷ್ಣ ಸವಾಲು ಹಾಕಿದರು.