ಉದ್ಯಮಿಯ ಮನೆಯಲ್ಲಿ ಜೀತದಾಳಾಗಿದ್ದ 10ರ ಬಾಲಕಿಯ ರಕ್ಷಣೆ

Update: 2017-05-09 13:06 GMT

ದಾವಣಗೆರೆ,ಮೇ 9 : ನಗರದ ಉದ್ಯಮಿಯೊಬ್ಬರ ಮನೆಯಲ್ಲಿ ಜೀತದಾಳಾಗಿ ದುಡಿಯುತ್ತಿದ್ದ 10 ವರ್ಷದ ಬಾಲಕಿಯನ್ನು ಚೈಲ್ಡ್‌ಲೈನ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಂಗಳವಾರ ರಕ್ಷಿಸಿದ್ದಾರೆ.

ನಗರದ ಖಾಸಗಿ ಬಸ್ ನಿಲ್ದಾಣ ಮುಂಭಾಗ ಶಾಂತಿಪಾರ್ಕ್ ಸಮೀಪದ ಮನೆಯೊಂದರಲ್ಲಿ ಚಿಕ್ಕಮಗಳೂರು ಜಿಲ್ಲೆ ಲಂಬಾಣಿ ತಾಂಡದ ಬಾಲಕಿ ಕಾರ್ಮಿಕಳಾಗಿ ದುಡಿಯುತ್ತಿರುವ ಖಚಿತ ಮಾಹಿತಿ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ವಿಜಯಕುಮಾರ್ ಮತ್ತು ಇತರ ಅಧಿಕಾರಿಗಳನ್ನು ಒಳಗೊಂಡ ತಂಡ ಮಂಗಳವಾರ ಮಧ್ಯಾಹ್ನ ಮನೆಯ ಮೇಲೆ ದಾಳಿ ನಡೆಸಿದಾಗ ಬಾಲಕಿ ಬಟ್ಟೆ ಒಗೆಯುತ್ತಿದ್ದಳು.

ಈ ಮನೆಯಲ್ಲಿ ಕೂಡಲೇ ಬಾಲಕಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು ಮನೆಯ ಮಾಲೀಕರಿಂದ ಬಾಲಕಿಯ ಪೂರ್ವಾಪರ ಮಾಹಿತಿ ಕಲೆ ಹಾಕಿ ನಂತರ ಬಾಲಕಿಯನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಕಳೆದ 15 ದಿನಗಳಿಂದ ಈ ಬಾಲಕಿ ಮನೆಯಲ್ಲಿ ಬಟ್ಟೆ ತೊಳೆಯವುದು,ಕಸ ಗುಡಿಸುವುದು ಮತ್ತು ಮುಸುರೆ ತೊಳೆಯವುದನ್ನು ಗಮನಿಸಿದ್ದ ಸಾರ್ವಜನಿಕರು ಚೈಲ್‌ಲೈನ್‌ಗೆ ಮಾಹಿತಿ ನೀಡಿ ಬಾಲಕಿಯನ್ನು ರಕ್ಷಿಸುವಲ್ಲಿ ಸಹಕರಿಸಿದ್ದಾರೆ.

ಬಾಲಕಿಯನ್ನು ರಕ್ಷಿಸಿದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ವಿಜಯ್‌ಕುಮಾರ್ ಈ ಬಾಲಕಿಗೆ ವಿದ್ಯಾಭ್ಯಾಸ ಮಾಡಿಸಲು ಕರೆ ತಂದಿರುವುದಾಗಿ ಮನೆಯ ಮಾಲೀಕರು ಹೇಳುತ್ತಿದ್ದಾರೆ. ಆದರೆ, ಈ ಬಾಲಕಿಯನ್ನು ಚಿಕ್ಕಮಗಳೂರಿನಲ್ಲಿರುವ ಅವರ ಪೋಷಕರು ಮನೆಗೆಲಸಕ್ಕೆಂದು ಯಾವುದೋ ಮೂಲದಿಂದ ಇಲ್ಲಿಗೆ ಬಿಟ್ಟು ಹೋಗಿದ್ದಾರೆ.ಈ ಬಾಲಕಿಯ ಪೋಷಕರಿಗೆ 5 ಜನ ಹೆಣ್ಣು ಮಕ್ಕಳು.ಈ ಮಗು ಎರಡನೆಯದು.ಇದೀಗ ರಕ್ಷಿಸಿರುವ ಈ ಬಾಲಕಿಗೆ ಓದಿನಲ್ಲಿ ಆಸಕ್ತಿ ಇದ್ದರೆ ಬಾಲಕಿಯರ ಬಾಲಮಂದಿರದಲ್ಲಿ ಇಟ್ಟು ವಿದ್ಯಾಭ್ಯಾಸ ನೀಡಲಾಗುವುದು ಮತ್ತು ಪೋಷಕರಿಗೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದರು.

ಬಾಲಕಿಯನ್ನು ಮನೆಗೆಲಸಕ್ಕೆ ಇಟ್ಟುಕೊಂಡಿದ್ದ ಮನೆಯ ಮಾಲೀಕರು ವಿರುದ್ಧ ಬಾಲ ಕಾರ್ಮಿಕ ನಿಷೇದ ಕಾಯಿದೆ ಉಲ್ಲಂಘನೆ ಕುರಿತು ಪ್ರಕರಣ ದಾಖಲಿಸುವುದಾಗಿ ವಿಜಯಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News