’ಶಿವಮೊಗ್ಗ ನಗರದಲ್ಲಿ ಫ್ಲೆಕ್ಸ್ ಅಳವಡಿಕೆ ಸಂಪೂರ್ಣ ನಿಷೇಧ’ : ಮಹಾನಗರ ಪಾಲಿಕೆ ಆಯುಕ್ತ ಮುಲ್ಲೈ ಮುಯಿಲನ್
ಶಿವಮೊಗ್ಗ, ಮೇ. 9: ಶಿವಮೊಗ್ಗ ನಗರದ ಪ್ರಮುಖ ರಸ್ತೆ, ವೃತ್ತ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಅಳವಡಿಕೆ ಮೇಲೆ ಸಂಪೂರ್ಣ ನಿಷೇಧ ಹೇರಿ ಮಹಾನಗರ ಪಾಲಿಕೆ ಆಡಳಿತ ಈ ಹಿಂದೆಯೇ ನಿರ್ಣಯ ಅಂಗೀಕರಿಸಿತ್ತು. ಆದರೆ ತಾನೇ ಕೈಗೊಂಡ ನಿರ್ಣಯ ಪಾಲನೆ ಮಾಡುವಲ್ಲಿ ಆಡಳಿತ ವಿಫಲವಾಗಿತ್ತು. ಕಳೆದೊಂದು ವರ್ಷದಿಂದ ನಗರದಲ್ಲಿ ಫ್ಲೆಕ್ಸ್-ಬಂಟಿಂಗ್ಸ್ ಭರಾಟೆ ಮಿತಿಮೀರಿತ್ತು.
ಇದಕ್ಕೆ ಕಡಿವಾಣ ಹಾಕಲು ಪಾಲಿಕೆಯ ನೂತನ ಆಯುಕ್ತ ಮುಲ್ಲೈ ಮುಯಿಲನ್ ಮುಂದಾಗಿದ್ದಾರೆ. ಮಂಗಳವಾರದಿಂದ ಫ್ಲೆಕ್ಸ್ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದ್ದು, ನಗರದ ವಿವಿಧೆಡೆ ನೂರಾರು ಫ್ಲೆಕ್ಸ್-ಬಂಟಿಂಗ್ಸ್‌ಗಳನ್ನು ಪಾಲಿಕೆಯ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ.
ಮಂಗಳವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ’ಕಾನೂನು - ಸುವ್ಯವಸ್ಥೆ ಸೇರಿದಂತೆ ಹಲವು ಕಾರಣಗಳ ಹಿನ್ನೆಲೆಯಲ್ಲಿ ಕೆಲ ವರ್ಷಗಳ ಹಿಂದೆಯೇ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ - ಬಂಟಿಂಗ್ಸ್ ಅಳವಡಿಕೆ ಮಾಡುವುದನ್ನು ನಿರ್ಬಂಧಿಸಿ ನಿರ್ಣಯ ಅಂಗೀಕರಿಸಲಾಗಿದೆ. ಅದರಂತೆ ನಿರ್ಣಯದ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ತಾವು ಕ್ರಮಕೈಗೊಂಡಿದ್ದೆನೆ’ ಎಂದು ಸ್ಪಷ್ಟಪಡಿಸಿದ್ದಾರೆ.
’ನಗರದ ವಿವಿಧೆಡೆ ಹಾಕಲಾಗಿದ್ದ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ. ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಅಳವಡಿಕೆಗೆ ಅವಕಾಶ ನೀಡುವುದಿಲ್ಲ. ನಿಯಾಮಾನುಸಾರ ಫ್ಲೆಕ್ಸ್ ಅಳವಡಿಕೆ ಅನುಮತಿ ನೀಡಲಾಗುವುದು. ನಿಯಮ ಉಲ್ಲಂಘಿಸುವವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಸ್ವಚ್ಚತಾ ರ್ಯಾಂಕಿಂಗ್ ಪಟ್ಟಿಯಲ್ಲಿ ಶಿವಮೊಗ್ಗ ಪಾಲಿಕೆಯು 147 ನೇ ಸ್ಥಾನ ಪಡೆದುಕೊಂಡಿರುವ ಬಗ್ಗೆ ಅವರು ಪ್ರತಿಕ್ರಿಯಿಸಿ, ’ನಗರದಲ್ಲಿ ಘನತ್ಯಾಜ್ಯ ವಿಲೇವಾರಿ ಹಾಗೂ ಸ್ವಚ್ಚತೆಯಲ್ಲಿ ಮತ್ತಷ್ಟು ಸುಧಾರಣೆ ತರಲು ಕ್ರಮಕೈಗೊಳ್ಳುತ್ತೆನೆ. ಮನೆ ಮನೆ ಕಸ ಸಂಗ್ರಹಿಸುವ ವ್ಯವಸ್ಥೆ ಅನುಷ್ಠಾನದಲ್ಲಿದ್ದರು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಬೀಳುತ್ತಿರುವುದು ಹೇಗೆಂಬುವುದರ ಪರಿಶೀಲನೆ ಕೂಡ ಮಾಡುತ್ತಿದ್ದೆನೆ. ಘನತ್ಯಾಜ್ಯ ವಿಲೇವಾರಿ ಹಾಗೂ ಸ್ವಚ್ಚತೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು ಕ್ರಮಕೈಗೊಳ್ಳುತ್ತೆನೆ’ ಎಂದರು.
ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪೂರ್ವಭಾವಿಯಾಗಿ ವಿಶೇಷ ವಾಹಕ ಘಟಕ (ಎಸ್.ವಿ.ಪಿ.) ರಚಿಸಲಾಗಿದೆ. ಹಾಗೆಯೇ ಕನ್ಸಲೆಂಟ್ ಸಂಸ್ಥೆಯ ನೇಮಕ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. ಟಾಟಾ ಕನ್ಸಲೆಂಟ್ ಹಾಗೂ ಮತ್ತೊಂದು ಸಂಸ್ಥೆಯು ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನದ ಸಲಹೆ-ಸೂಚನೆ ನೀಡುವುದು ಸೇರಿದಂತೆ ಸಮಗ್ರ ಮೇಲುಸ್ತುವಾರಿ ನೋಡಿಕೊಳ್ಳಲಿದೆ. ಕನ್ಸಲೆಂಟ್ ಸಂಸ್ಥೆಗಳೊಂದಿಗೆ ಸೋಮವಾರ ’ಕಿಕ್ ಆಫ್ ಸ್ಟಾರ್ಟ್’ ಸಭೆ ಕೂಡ ನಡೆಸಲಾಗಿದೆ ಎಂದು ತಿಳಿಸಿದಾ್ದರೆ.
ಸುಧಾರಣೆ: ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ತರಲಾಗುವುದು. ಇದು ಆಡಳಿತಾತ್ಮಕ ವಿಚಾರವಾಗಿದ್ದು, ಈ ಬಗ್ಗೆ ಬಹಿರಂಗವಾಗಿ ಏನನ್ನೂ ಹೇಳುವುದಿಲ್ಲ. ಅಧಿಕಾರಿಗಳು, ನೌಕರರ ಕರ್ತವ್ಯ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದೆನೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.