×
Ad

ರಾಜ್ಯದಲ್ಲಿ ಪೆಟ್ರೋಲ್ ಖರೀದಿ ಸ್ಥಗಿತ

Update: 2017-05-10 19:07 IST

ಬೆಂಗಳೂರು, ಮೇ 10: ಕೇಂದ್ರ ಸರಕಾರದ ಸ್ವಾಮ್ಯದ ಆಯಿಲ್ ಸಂಸ್ಥೆಗಳು ಕಮಿಷನ್ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಸಂಘಟನೆ ಬುಧವಾರದಿಂದ ಪೆಟ್ರೋಲಿಯಂ ಉತ್ಪನ್ನಗಳ ಖರೀದಿ ಸ್ಥಗಿತಗೊಳಿಸಿದೆ.

 ಹೊಸಕೋಟೆಯ ದೇವನಗುಂದಿಯಲ್ಲಿರುವ ಸರಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಇಂಡಿಯನ್ ಆಯಿಲ್ ಕಂಪೆನಿಗಳಿಂದ ಇಂಧನ ಖರೀದಿಸುವುದನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ ಮುಂದಿನ ಎರಡು ಮೂರು ದಿನಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಕಾಡಲಿದ್ದು, ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ಉದ್ಬವಿಸಲಿದೆ.

   ಕೂಡಲೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮೇ 14ರಂದು ರಾಜ್ಯಾದ್ಯಂತ ಬಂಕ್ ಬಂದ್‌ಗೆ ಕರೆ ನೀಡಲಾಗುವುದು. ಅಲ್ಲದೆ ಬೇಡಿಕೆ ಈಡೇರುವವರೆಗೂ ಪ್ರತಿ ಭಾನುವಾರ ಪೆಟ್ರೋಲ್ ಬಂಕ್ ಬಂದ್ ಮಾಡುವುದಾಗಿ ಸಂಘಟನೆ ಎಚ್ಚರಿಕೆ ನೀಡಿದೆ.

  ಕಮಿಷನ್ ಹೆಚ್ಚಳ ಸೇರಿದಂತೆ ,ಅಧಿಕಾರಿಗಳು ನೀಡುವ ಕಿರುಕುಳ ತಪ್ಪಿಸಬೇಕು ಮತ್ತು ಡಿಪೋ ಬಳಿ ಟ್ರಕ್ ಚಾಲಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂಬ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ದಿನಗಳಿಂದ ಸರಕಾರದ ಮೇಲೆ ಒತ್ತಡ ತರಲಾಗುತ್ತಿದೆ. ಆದರೂ ಸರಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸಂಘಟನೆಯ ಅಧ್ಯಕ್ಷ ರವೀಂದ್ರನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.

    ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ನವೆಂಬರ್ ತಿಂಗಳಲ್ಲಿ ನಗರದಲ್ಲಿ ನಿರಂತರವಾಗಿ ಐದಾರು ದಿನಗಳ ಕಾಲ ಧರಣಿ ನಡೆಸಲಾಗಿತ್ತು. ಆಗ ನಿಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಸರಕಾರ ಭರವಸೆ ನೀಡಿತ್ತು. ಆದರೆ ಸರಕಾರ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News