ಬೆಳ್ಳಂಬೆಳಗ್ಗೆ 4 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ: ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆ
ಬೆಂಗಳೂರು, ಮೇ 10: ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪ ಕೇಳಿಬಂದ ಬೆನ್ನಲ್ಲೇ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ರಾಜಧಾನಿ ಬೆಂಗಳೂರಿನಲ್ಲಿ ಮುಂಜಾನೆ ಏಕಕಾಲದಲ್ಲಿ ನಾಲ್ಕು ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿದ್ದು, ಅಧಿಕಾರಿಗಳ ಬಳಿ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿರುವುದು ಗೊತ್ತಾಗಿದೆ.
ಬುಧವಾರ ಮುಂಜಾನೆ ನಾಗರಬಾವಿಯಲ್ಲಿರುವ ಬಿಬಿಎಂಪಿ ಪೂರ್ವವಲಯದ ಜಂಟಿ ಆಯುಕ್ತ ಡಾ.ಯತೀಶ್ ಕುಮಾರ್, ರಾಮನಗರ ತಹಶೀಲ್ದಾರ್ ಎನ್.ರಘುಮೂರ್ತಿ, ಕೆಪಿಟಿಸಿಎಲ್ ನಿರ್ದೇಶಕ ಎಚ್.ನಾಗೇಶ್ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ಸೂಪರಿಂಟೆಂಡೆಂಟ್ ರಾಮಕೃಷ್ಣಾರೆಡ್ಡಿ ಅವರ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆಸ್ತಿಪತ್ರಗಳನ್ನು ಪರಿಶೀಲಿಸಿದರು.
ಯತೀಶ್ ಆಸ್ತಿ ವಿವರ: ಪಾಲಿಕೆಯ ಪೂರ್ವವಲಯದ ಜಂಟಿ ಆಯುಕ್ತ ಡಾ.ಯತೀಶ್ ಕುಮಾರ್ ನಾಗರಬಾವಿಯಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದಾಗ, ನಗರದ ಬಿಟಿಎಂ ಲೇಔಟ್‌ನಲ್ಲಿ 1.5 ಕೋಟಿ ರೂ.ಮೌಲ್ಯದ ನಿವೇಶನ, ನಾಗರಬಾವಿಯಲ್ಲಿ 1.25 ಕೋಟಿ ರೂ.ಮನೆ, ಮೈಸೂರಿನಲ್ಲಿ ಎರಡು ನಿವೇಶನ, 4 ಲಕ್ಷ ರೂ.ನಗದು, 25 ಲಕ್ಷ ರೂ.ಮೌಲ್ಯದ ಚಿನ್ನಾಭರಣ, ಎರಡು ಕಾರುಗಳಿವೆ ಎನ್ನುವ ದಾಖಲೆ ಪತ್ರಗಳು ಪತ್ತೆಯಾಗಿವೆ ಎಂದು ಎಸಿಬಿ ಅಧಿಕೃತ ಮೂಲಗಳು ತಿಳಿಸಿವೆ.
ಜೈಲಿನಲ್ಲಿದ್ದರೂ ದಾಳಿ: ರಾಮನಗರ ತಹಶೀಲ್ದಾರ್ ಎನ್.ರಘುಮೂರ್ತಿ ಅವರು 2011ರಲ್ಲಿ ಮೈಸೂರಿನ ಮಾದಹಳ್ಳಿಯಲ್ಲಿ ಶಿರಸ್ತೇದಾರರಾಗಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರಿಗೆ ಖಾತೆ ಮಾಡಿಕೊಡಲು 5 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಸೆಷನ್ಸ್ ನ್ಯಾಯಾಲಯ ಅವರಿಗೆ ನಾಲ್ಕು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು. ನಾಲ್ಕು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದರು ಎನ್ನಲಾಗಿದೆ. ಅಲ್ಲದೆ, ಇವರ ವಿರುದ್ಧ ಸಾರ್ವಜನಿಕರಿಂದ ಬಂದಿರುವ 20ಕ್ಕೂ ಅಧಿಕ ದೂರುಗಳನ್ನು ಆಧರಿಸಿ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಆಸ್ತಿ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೆಪಿಟಿಸಿಎಲ್ ನಿರ್ದೇಶಕ: ನಗರದ ಕಾವೇರಿ ಭವನದ ಕೆಪಿಟಿಸಿಎಲ್ ಕಚೇರಿಯಲ್ಲಿ ನಿರ್ದೇಶಕರಾಗಿರುವ ಎಚ್.ನಾಗೇಶ್ ಅವರಿಗೆ ಸೇರಿದ ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮದಲ್ಲಿರುವ ನಿವಾಸಗಳ ಮೇಲೂ ಮುಂಜಾನೆ ಎಸಿಬಿ ದಾಳಿ ನಡೆಸಿತು. ಅವರ ಪುತ್ರ ಹಾಗೂ ಪತ್ನಿ ಹೆಸರಿನಲ್ಲಿದ್ದ ಅಕ್ರಮ ಆಸ್ತಿ ದಾಖಲೆಗಳು ಹಾಗೂ ಚಿನ್ನಾಭರಣಗಳನ್ನು ಮುಟ್ಟುಗೋಲು ಹಾಕಿದ್ದಾರೆ.
ರಾಮಕೃಷ್ಣಾರೆಡ್ಡಿ: ತಾಂತ್ರಿಕ ಶಿಕ್ಷಣ ಇಲಾಖೆಯ ಸೂಪರಿಂಟೆಂಡೆಂಟ್ ರಾಮಕೃಷ್ಣಾರೆಡ್ಡಿ ಅವರು ಬ್ಯಾಟರಾಯನಪುರದಲ್ಲಿ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿ ಹೊಂದಿರುವ ವಿಚಾರ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಇನ್ನು ಬ್ಯಾಂಕ್ ಖಾತೆಯಲ್ಲಿ 20 ಲಕ್ಷ ರೂ. ಠೇವಣಿ, ದುಬಾರಿ ಕಾರು ಹೊಂದಿರುವುದು ದಾಳಿಯಲ್ಲಿ ಬೆಳಕಿಗೆ ಬಂದಿದೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಸಂಬಂಧ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡ ಎಸಿಬಿ ಅಧಿಕಾರಿಗಳು, ನಾಲ್ವರು ಅಧಿಕಾರಿಗಳಿಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿಗಳ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.
ನಕಲಿ ಡಿಸಿ ಕಾರ್ಡ್ ಗಲಾಟೆ
ನಗರದ ಕೆಂಪಾಪುರದ ವಿನಾಯಕ ಲೇಔಟ್‌ನ ತೇಜೋ ನಿಲಯದ ಮೇಲೆ ಎಸಿಬಿ ದಾಳಿ ನಡೆಸಿದಾಗ ತಾಂತ್ರಿಕ ಶಿಕ್ಷಣ ಇಲಾಖೆಯ ಸೂಪರಿಂಟೆಂಡೆಂಟ್ ರಾಮಕೃಷ್ಣಾರೆಡ್ಡಿ ಪುತ್ರ ತೇಜಸ್ ರೆಡ್ಡಿ, ನಾನು ಜಿಲ್ಲಾಧಿಕಾರಿ ಎಂದು ಹೇಳಿಕೊಂಡು ಅಧಿಕಾರಿಗಳ ಮೇಲೆ ಗಲಾಟೆ ಮಾಡಿರುವುದಾಗಿ ತಿಳಿದುಬಂದಿದೆ. ಅಲ್ಲದೆ, ಡಿಸಿ ಹೆಸರಿನ ನಕಲಿ ಗುರುತಿನ ಚೀಟಿ ಎಸಿಬಿ ಅಧಿಕಾರಿಗಳಿಗೆ ತೋರಿಸಿ ಮಾತಿನ ಚಕಮಕಿ ನಡೆಸಲು ಮುಂದಾಗಿದ್ದ ವೇಳೆ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಸಂಬಂಧ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡ ಎಸಿಬಿ ಅಧಿಕಾರಿಗಳು, ನಾಲ್ವರು ಅಧಿಕಾರಿಗಳಿಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿಗಳ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.