×
Ad

ಹೇಮರಡ್ಡಿ ಮಲ್ಲಮ್ಮನವರ ಜೀವನ ಚರಿತ್ರೆ ಪಠ್ಯಪುಸ್ತಕದಲ್ಲಿ ಅಳವಡಿಸಬೇಕಿದೆ: ಹೆಚ್.ಡಿ. ದೇವೇಗೌಡ

Update: 2017-05-10 22:29 IST

ಚಿಕ್ಕಮಗಳೂರು, ಮೇ.10: ರಾಜ್ಯ ಸರಕಾರ ಮಹಾಸಾದ್ವಿ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಸರಕಾರದ ಆಚರಣೆಯಾಗಿ ಘೋಷಿಸಿರುವುದಕ್ಕೆ ಸರಕಾರವನ್ನು ಅಭಿನಂದಿಸಲಾಗುವುದು. ಇದೇ ರೀತಿ ಹೇಮರಡ್ಡಿ ಮಲ್ಲಮ್ಮನವರ ಆದರ್ಶ, ತತ್ವ, ಜೀವನ ಚರಿತ್ರೆ ಮುಂದಿನ ಪೀಳಿಗೆಗೆ ತಿಳಿಸಲು ಪಠ್ಯಪುಸ್ತಕದಲ್ಲಿ ಅಳವಡಿಸಬೇಕಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದರು.

 ಅವರು ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಹಾಸಾದ್ವಿ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜಿಲ್ಲಾಮಟ್ಟದ ಜಯಂತ್ಯೋತ್ಸವ ಕಾರ್ಯಕ್ರಮದ 2ನೆ ದಿನವಾದ ಬುಧವಾರ ಬೆಳಗ್ಗೆ ಕಾರ್ಯಕ್ರಮದಲ್ಲಿ ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದರು.

ಹೇಮರಡ್ಡಿ ಮಲ್ಲಮ್ಮನವರು ತನ್ನ ಗಂಡನ ಹಾಗೂ ಸಮಾಜದ ಕಿರುಕುಳದ ಮಧ್ಯೆ ಉತ್ತಮ ಬದುಕಿದ ಆದರ್ಶಗಳು ಈಗಿನ ಮಹಿಳೆಯರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿಗೆ. ಈ ಸಾದ್ವಿಯವರ ಶ್ರೇಷ್ಠವಾದ ಕೆಲಸಗಳನ್ನು ಮೆಚ್ಚಿ ಶಿವ ಇವರಿಗೆ ಪ್ರತ್ಯಕ್ಷವಾಗಿದ್ದು ಸಾಕ್ಷಿಯಾಗಿದೆ. ಈ ಕಾರ್ಯಕ್ರಮದಿಂದಲಾದರೂ ನಾಡಿಗೆ ಉತ್ತಮ ಮಳೆಯಾಗಬೇಕಿದೆ ಎಂದು ತಿಳಿಸಿದರು.
  ಸಮಾರಂಭವನ್ನು ಸಾಹಿತಿ ಡಾ. ಗೊ.ರು. ಚನ್ನಬಸಪ್ಪ ಉದ್ಘಾಟಿಸಿ ಮಾತನಾಡಿದರು. ರಾಜ್ಯದ ರೆಡ್ಡಿ ಸಮಾಜದ ಜನತೆಯ ಪರವಾಗಿ ರಾಜ್ಯ ಸರ್ಕಾರಕ್ಕೆ ಅಭಿನಂದಿಸುವ ಕೆಲಸವನ್ನು ಮಾಡಲಾಗುವುದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಿರ್ಧಾರ ಇಡೀ ಜನಾಂಗಕ್ಕೆ ಸಂತಸ ಮೂಡಿಸಿದೆ. ಸರಕಾರವು ದಾರ್ಶನಿಕರ ಪುರಾಣದಲ್ಲಿ ಬರುವವರ, ರಾಷ್ಟ್ರ ಚರಿತ್ರೆಯಲ್ಲಿ ಬರುವವರ ಜಯಂತಿ ಆಚರಣೆ ನಡೆಸುತ್ತಿರುವುದು ಒಳ್ಳೆಯ ಕಾರ್ಯವಾಗಿದೆ ಎಂದು ಹೇಳಿದರು.

ಮಲ್ಲಮ್ಮನವರು ಧರ್ಮ ಸ್ಥಾಪಕಿ ಪ್ರಜ್ಞಾವಂತ ಮಹಿಳೆಯಾಗಿ ಇಂದಿನ ಮಹಿಳೆಯರಿಗೆ ಆದರ್ಶರಾಗಿದ್ದಾರೆ. ಎಲ್ಲರಿಗೂ ಬೇಕಾಗುವಂತಹ ಗ್ರಂಥಗಳನ್ನು ರಚಿಸಿದವರು. ಹೆಣ್ಣು ನಿಜವಾದ ಗೃಹಿಣಿಯಾಗದೇ ಇದ್ದರೆ ಸಮಾಜ ಏನಾಗಲಿದೆ ಎಂಬಂತಾಗಿದೆ. ಸಮಾಜದಲ್ಲಿ ಹೆಣ್ಣಿಗೆ ಹೆಚ್ಚು ಸ್ಥಾನಮಾನ ನೀಡಲಾಗಿದೆ. ಸಭ್ಯ, ಸಜ್ಜನಿಕೆ, ಸಾದ್ವಿ ಗೃಹಿಣಿಯಾದಾಗ ಮಾತ್ರ ಸಂಸಾರ ಸಾಗಲು ಸಾಧ್ಯ. ಬರಹಗಾರರ ಉದಾಸೀನತೆಯಿಂದಾಗಿ ಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಹೆಚ್ಚು ಪ್ರಚಲಿತಕ್ಕೆ ಬಾರದೇ ಇದ್ದುದು ದುರಷ್ಟಕರ. ಇತ್ತೀಚಿನ 50 ವರ್ಷಗಳಿಂದ ಹೇಮರಡ್ಡಿ ಮಲ್ಲಮ್ಮನವರು ಹೆಚ್ಚು ಪ್ರಚಾರಕ್ಕೆ ಬಂದಿರುತ್ತಾರೆಂದು ತಿಳಿಸಿದರು. ಸಮಾರಂಭದಲ್ಲಿ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಶೈಲ ಕ್ಷೇತ್ರ ಇವರು ಮಾತನಾಡಿದರು.
  ಸಮಾರಂಭದಲ್ಲಿ ಶಾಸಕ ವೈ.ಎಸ್.ವಿ. ದತ್ತ, ಎಂಎಲ್‌ಸಿ ಶರವಣ, ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ, ಜಿ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು, ತಾ.ಪಂ. ಅಧ್ಯಕ್ಷೆ ರೇಣುಕಾ ಉಮೇಶ್, ಜಿಪಂ ಸದಸ್ಯರಾದ ವನಮಾಲ ದೇವರಾಜ್, ಶರತ್ ಕೃಷ್ಣಮೂರ್ತಿ, ಕಾವೇರಿ ಲಕ್ಕಪ್ಪ, ಟಿ.ಕೆ. ಜಗದೀಶ್, ಭಂಡಾರಿ ಶ್ರೀನಿವಾಸ್, ಎಂ.ಹೆಚ್. ಚಂದ್ರಪ್ಪ, ಕೆ.ಎಂ. ಮಹೇಶ್ವರಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News