ಕನ್ನಡದಲ್ಲಿ ದಲಿತರ ಪೌರೋಹಿತ್ಯ ಕ್ರಮ ಅರ್ಥಪೂರ್ಣ: ಪಂಡಿತಾರಾಧ್ಯ ಸ್ವಾಮೀಜಿ
ಮೂಡಿಗೆರೆ, ಮೇ 10: ಬುದ್ಧ, ಬಸವ ಅಂಬೇಡ್ಕರ್‌ರ ನೆನಪಿನಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿರಿಸುವ ವೇಳೆ ದಲಿತರು ಕನ್ನಡದಲ್ಲಿ ಪೌರೋಹಿತ್ಯ ನೆರವೇರಿಸಿರುವ ಕ್ರಮ ಅರ್ಥಪೂರ್ಣ ಎಂದು ಶ್ರೀ ತರಳಬಾಳು ಜಗದ್ಗುರು ಶಾಖಾಮಠದ ಸಾಣೆಹಳ್ಳಿ ಮಠದ ಪೀಠಾಧ್ಯಕ್ಷ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಅವರು ಬುಧವಾರ ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣಾ ಸಮಿತಿ ಮತ್ತು ಆಶ್ರಯ ಸಾಮಾಜಿಕ ಸೇವಾ ಸಂಸ್ಥೆ ಹಮ್ಮಿಕೊಂಡಿದ್ದ ಅಂಬೇಡ್ಕರ್‌ರ 126ನೆ ಜನ್ಮ ದಿನಾಚರಣೆ ಹಾಗೂ ಸರಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಪೌರೋಹಿತ್ಯವನ್ನು ಯಾರು ಬೇಕಾದರೂ ನಡೆಸಿಕೊಡಬಹುದು ಎಂಬುದನ್ನು ಇಂದಿನ ಸರಳ ಸಾಮೂಹಿಕ ವಿವಾಹದಿಂದ ನಿರೂಪಿಸಲಾಗಿದೆ ಎಂದರು.
ನೂತನ ದಂಪತಿಗಳು ಹೆಣ್ಣು-ಗಂಡು ಎಂಬ ತಾರತಮ್ಯಗಳಿಲ್ಲದೇ ಪರಸ್ಪರ ಪ್ರೀತಿ ವಿಶ್ವಾಸವನ್ನು ಇಟ್ಟುಕೊಂಡು ಕೇವಲ ಬಾಹ್ಯಾ ಸಂಪತ್ತನ್ನು ಗಣನೆಗೆ ತೆಗೆದುಕೊಳ್ಳದೆ ಒಂದಾಗಿ ಬಾಳಬೇಕು. ಜಾತಿ ಎಂಬುದು ಗೌಣವಾಗಿದೆ. ನಾವು ವಾಸಿಸುವ ನೆಲಕ್ಕೆ, ಕುಡಿಯುವ ನೀರಿಗೆ ಜಾತಿ ಎಂಬುದಿಲ್ಲ. ಆದರೆ ಮಾನವನಲ್ಲಿ ಜಾತಿ ಎಂಬ ಪೆಡಂಭೂತ ಇರುವುದು ದೊಡ್ಡ ದುರಂತ. ಜಾತಿಯ ಭೂತವನ್ನು 12ನೆ ಶತಮಾನದಲ್ಲೇ ಸುಟ್ಟು ಹಾಕಲಾಗಿತ್ತು.
ನೂತನ ದಂಪತಿಗಳು ಯಾವುದೇ ಸಂದರ್ಭಗಳಲ್ಲಿಯೂ ಜಾತಿ, ಧರ್ಮಗಳನ್ನು ಗಣನೆಗೆ ತೆಗೆದುಕೊಳ್ಳದೇ ಸುಂದರ ಜೀವನ ನಡೆಸಬೇಕೆಂದು ಕರೆ ನೀಡಿದರು. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಕಾಂನ್ವೆಂಟ್‌ಗಳಲ್ಲಿ ಸಂಸ್ಕಾರ ಎಂಬುವುದು ಇರುವುದಿಲ್ಲ. ಬಾಲ್ಯದಲ್ಲಿಯೇ ಉತ್ತಮ ಶಿಕ್ಷಣ ಕೊಡುವ ಶಾಲೆಗಳಿಗೆ ಸೇರಿಸಿ ಸಂಸ್ಕಾರ ಕಲಿಸದಿದ್ದರೆ ಮಕ್ಕಳು ತಮ್ಮ ಜೀವನದಲ್ಲಿ ಎತ್ತರಕ್ಕೇರಲು ಸಾಧ್ಯವಿಲ್ಲ. ಆದ್ದರಿಂದ ನೂತನ ದಂಪತಿಗಳು ನಿಮ್ಮಂದ ಹೊರಹೊಮ್ಮುವ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಿ ಅಂಬೇಡ್ಕರ್, ಬಸವಣ್ಣನಂತಹ ಮಹಾನ್ ವ್ಯಕ್ತಿಗಳನ್ನಾಗಿ ನಿರೂಪಿಸಬೇಕೆಂದು ಹೇಳಿದರು. ಪ್ರಾರಂಭದಲ್ಲಿ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ 26 ಜೋಡಿ ವಧುವರರು ಪೂಜೆ ಸಲ್ಲಿಸಿ, ನಂತರ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಮೂಹೂರ್ತ ನಡೆಯುವ ಸ್ಥಳ ಅಡ್ಯಂತಾಯ ರಂಗಮಂದಿರಕ್ಕೆ ಆಗಮಿಸಿದರು. ಕೆ.ಕೆ.ರಾಮಯ್ಯ, ಕೆ.ವಿ.ಸಾಗರ್, ಡಿ.ಬಿ.ರಾಮಯ್ಯ, ಬಿ.ಬಿ.ರಮೇಶ್, ಎಂ.ಎಸ್.ಆನಂದ್, ಎಚ್.ಟಿ.ಸುಬ್ರಮಣ್ಯ, ಕೋಮರಾಜು, ಎಚ್.ಟಿ.ತಿಮ್ಮಯ್ಯ ಇವರು ಕನ್ನಡದಲ್ಲಿ ಮಂತ್ರವನ್ನು ಪಠಿಸಿ ಮಂಗಳ ಕಾರ್ಯ ನೆರವೇರಿಸಿದರು. 26 ಜೋಡಿಗಳು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಗೃಹಾಸ್ಥಮಕ್ಕೆ ಕಾಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಎಲ್ಸಿ ಡಾ.ಮೋಟಮ್ಮ ವಹಿಸಿದ್ದರು. ಶಾಸಕ ಬಿ.ಬಿ.ನಿಂಗಯ್ಯ, ಎಂಎಲ್‌ಸಿ ಎಂ.ಕೆ.ಪ್ರಾಣೇಶ್ ಮಾತನಾಡಿದರು. ಸಮಾಜಸೇವಕ ಅಲ್ತಾಫ್ ಬಿಳಗುಳ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ತಾಪಂ ಅಧ್ಯಕ್ಷ ಕೆ.ಸಿ.ರತನ್, ಜಿಪಂ ಸದಸ್ಯ ಶಾಮಣ್ಣ, ಪಪಂ ಅಧ್ಯಕ್ಷೆ ರಮಿಜಾಬಿ, ಮುಖಂಡರಾದ ಎಂ.ಎಸ್.ಅನಂತ್, ಹೆಚ್.ಪಿ.ರಮೇಶ್, ಬಿ.ಎಸ್.ಜಯರಾಂ, ಎಂ.ಎಂ.ಲಕ್ಷ್ಮಣ್‌ಗೌಡ, ಕೆ.ಆರ್.ಮಹೇಶ್, ಅಕ್ರವ್ಹಾಜಿ, ಎಂ.ಸಿ.ನಾಗೇಶ್, ವೆಂಕಟರಾವ್, ಎ.ಜೆ.ಸುಬ್ರಾಯಗೌಡ, ಯು.ಆರ್.ರುದ್ರಯ್ಯ, ಸಬ್ಲಿ ದೇವರಾಜು, ಪರಿಮಳ ಅನಂತ್ ಮತ್ತಿತರರಿದ್ದರು.
ಡಾ. ಮೋಟಮ್ಮರ ಪುತ್ರಿ ನಯನಜ್ಯೋತಿ ಅವರು, 26 ನೂತನ ವಧೂಗಳಿಗೆ ಚಿನ್ನದ ಮೂಗುತಿ ನೀಡಿದರು.
ನಾವು ಜೀವನದಲ್ಲಿ ಅಂಬೇಡ್ಕರ್‌ರರು ತೋರಿದ ಮಾರ್ಗದಲ್ಲಿ ನಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತೇವೆ. ನಾವೆಲ್ಲಾ ಚೆನ್ನ್ನಾಗಿ ಓದಿ, ದೊಡ್ಡ ಹುದ್ದೆಗಳನ್ನು ಅಲಂಕರಿಸುತ್ತೇವೆ.
ಸಮಾಜದಲ್ಲಿರುವ ಜಾತಿ ವ್ಯವಸ್ಥೆ, ಅಸಮಾನತೆಯನ್ನು ತೊಡೆದು ಹಾಕುತ್ತೇವೆ. ಅಂಬೇಡ್ಕರ್‌ರರು ನಡೆಸಿದ ಹೋರಾಟದ ರಥವನ್ನು ನಾವು ಮುಂದಕ್ಕೆ ಸಾಗಿಸುತ್ತೇವೆ. ಅದನ್ನು ಹಿಂದೆ ಬಿಡುವುದಿಲ್ಲ ಎಂದು ಡಾ.ಮೋಟಮ್ಮ ಅವರಿಂದ ಶಾಲಾ ಮಕ್ಕಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.