ಮಣ್ಣು ಕುಸಿದು ಮೂವರು ಕಾರ್ಮಿಕರು ಮೃತ್ಯು
ಚಿಕ್ಕಮಗಳೂರು, ಮೇ 11: ಟ್ರ್ಯಾಕ್ಟರ್‌ಗೆ ಮರಳು ತುಂಬಿಸಲು ತೆರಳಿದ್ದ ಮೂವರು ಕೂಲಿ ಕಾರ್ಮಿಕರು ಮಣ್ಣು ಕುಸಿದುಬಿದ್ದು ಮೃತಪಟ್ಟ ಘಟನೆ ತರೀಕೆರೆ ತಾಲೂಕಿನ ರಂಗಾಪುರ ಹಳ್ಳದಲ್ಲಿ ನಡೆದಿದೆ.
ತರೀಕೆರೆ ತಾಲೂಕಿನ ಗೇರಮರಡಿ ನಿವಾಸಿಗಳಾದ ಮಂಜುನಾಥ್ (27), ಅರುಣಾ (22), ನವೀನ್ (20) ಮೃತರು. ಜೊತೆಯಲ್ಲಿದ್ದ ಉಳಿದ ಇಬ್ಬರು ಯುವಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತರೀಕೆರೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಡರಾತ್ರಿ ಗೇರಮರಡಿ ಆನಂದ, ಪಾಲಾಕ್ಷ, ರವಿ ಎಂಬವರಿಗೆ ಸೇರಿದ ಟ್ರ್ಯಾಕ್ಟರ್ ಗೆ ಮರಳು ತುಂಬುವಾಗ ಈ ಅವಘಡ ಸಂಭವಿಸಿದೆ.
ಮೃತ ಮೂವರು ಯುವಕರು ಕೂಲಿಗಾಗಿ ರಾತ್ರೋರಾತ್ರಿ ಮನೆಯಿಂದ ತೆರಳಿದ್ದರು. ಆ ಮೂವರು ಯುವಕರಲ್ಲಿ ನವೀನ್ ಎಂಬಾತ ಪೊಲೀಸ್ ಪರೀಕ್ಷೆಯಲ್ಲಿ ಉತ್ತಿರ್ಣನಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಪೊಲೀಸ್ ಪೇದೆಯಾಗಿ ಸೇವೆ ಆರಂಭಿಸಬೇಕಿತ್ತು.
ವಿಷಯ ತಿಳಿದ ಟ್ರ್ಯಾಕ್ಟರ್ ಮಾಲಕರು ಸ್ಥಳದಿಂದ ಕಾಲ್ತಿತ್ತಿದ್ದಾರೆ. ಅಕ್ರಮ ಮರಳು ದಂಧೆಯಿಂದ ಅಮಾಯಕ ಯುವಕರು ಬಲಿಯಾಗಿದ್ದು ತಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಕರಣ ಸಂಬಂಧ ತರೀಕೆರೆ ಪೊಲೀಸರು ಐಪಿಸಿ ಸೆಕ್ಷನ್ 304, 379,41ಎ, 21 ಎಂಎಂ ಆರ್ ಡಿ ಆಕ್ಟ್ ನಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಸೆರೆ ಹಿಡಿಯಲು ವಿಶೇಷ ತಂಡ ರಚನೆ ಮಾಡಿದ್ದಾರೆ. ತರೀಕೆರೆ ಪಿಎಸ್‌ಐ ಇಮ್ರಾನ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಎಎಸ್ಪಿ ಅಣ್ಣಪ್ಪ ನಾಯ್ಕ ಹೇಳಿದ್ದಾರೆ.