×
Ad

ದ್ವಿತೀಯ ಪಿಯು ಪರೀಕ್ಷೆಯಲ್ಲಿ ​ಅಂಧ ವಿದ್ಯಾರ್ಥಿಯ ಸಾಧನೆ

Update: 2017-05-11 19:39 IST

ಕಾರವಾರ, ಮೇ 11: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಅಂಧ ವಿದ್ಯಾರ್ಥಿ ಓಂಕಾರ ಪಾವಸ್ಕರ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 94.33ರ ಸಾಧನೆ ಮಾಡಿದ್ದಾರೆ.

ಕಲಾ ವಿಭಾಗದ ವಿದ್ಯಾರ್ಥಿಯಾಗಿರುವ ಓಂಕಾರ್, ಭಾಷಾ ವಿಷಯಗಳಾದ ಇಂಗ್ಲಿಷ್‌ನಲ್ಲಿ 88 ಅಂಕ, ಹಿಂದಿಯಲ್ಲಿ 96 ಅಂಕ ಪಡೆದಿದ್ದಾರೆ. ಇತಿಹಾಸದಲ್ಲಿ 95, ಅರ್ಥಶಾಸ್ತ್ರದಲ್ಲಿ 94, ಸಮಾಜಶಾಸ್ತ್ರದಲ್ಲಿ 100 ಹಾಗೂ ರಾಜ್ಯಶಾಸ್ತ್ರದಲ್ಲಿ 93 ಅಂಕವನ್ನು ಗಳಿಸಿದ್ದಾರೆ.

ತಾಲೂಕಿನ ಕುರ್ಸಾವಾಡದ ನಿವಾಸಿಯಾಗಿರುವ ಸಂತೋಷ ಪಾವಸ್ಕರ್ ಹಾಗೂ ಸುಜಾತಾ ದಂಪತಿಯ ಪುತ್ರನಾಗಿರುವ ಓಂಕಾರ ಅವರಿಗೆ ಜನ್ಮತಃ ದೃಷ್ಟಿ ಇರಲಿಲ್ಲ. ಬಹುಮುಖ ಪ್ರತಿಭಾವಂತರಾಗಿರುವ ಓಂಕಾರ್ ಅವರ ಸಾಧನೆಗೆ ಅಂಧತ್ವ ಎಂದಿಗೂ ಅಡ್ಡಿಬಂದಿಲ್ಲ. ಇವರು ಎಸೆಸೆಲ್ಸಿ ಪರೀಕ್ಷೆಯಲ್ಲೂ ಶೇ. 92 ಅಂಕಗಳೊಂದಿಗೆ ಕಾರವಾರದ ಸರಕಾರಿ ಪ್ರೌಢ ಶಾಲೆಗೆ ಮೊದಲನೇ ಸ್ಥಾನ ಪಡೆದು ಕೊಂಡಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಾಯಿ ಸುಜಾತಾ ಪಾವಸ್ಕರ್, ‘ನಾನು ಪಾಠವನ್ನು ಓಂಕಾರನ ಎದುರು ಕುಳಿತು ಓದುತ್ತಿದ್ದೆ. ಆತ ಲಕ್ಷ್ಯಕೊಟ್ಟು ಪಾಠ ಆಲಿಸುತ್ತಿದ್ದ. ಪ್ರಶ್ನೋತ್ತರಗಳನ್ನು ರೆಕಾರ್ಡ್ ಮಾಡಿ ಐಪ್ಯಾಡ್‌ನಲ್ಲಿ ಹಾಕಿ ಕೊಡುತ್ತಿದ್ದೆ. ಸದಾ ಐಪ್ಯಾಡ್ ಮೂಲಕ ಪ್ರಶ್ನೋತ್ತರಗಳನ್ನು ಆಲಿಸುತ್ತ ಮನನ ಮಾಡಿಕೊಳ್ಳುತ್ತಿದ್ದ’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News