ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಾಮಾನ್ಯಜನರ ದೃಷ್ಟಿಯಲ್ಲಿ ಅತ್ಯುತ್ತಮವಾಗಿದೆ: ಸಚಿವ ಕಾಗೋಡು ತಿಮ್ಮಪ್ಪ
ಸಾಗರ, ಮೇ 12: ಕಳೆದ 4 ವರ್ಷಗಳಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಸಾಮಾನ್ಯಜನರ ದೃಷ್ಟಿಯಲ್ಲಿ ಅತ್ಯುತ್ತಮವಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ರಾಜ್ಯ ಸರ್ಕಾರ 4 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೂರದರ್ಶಿತ್ವದ ಆಡಳಿತ ನಿಜಕ್ಕೂ ಮಾದರಿಯಾದದ್ದು ಎಂದು ಹೇಳಿದರು. ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ತಕ್ಷಣ ಜಾರಿಗೆ ತಂದ ಅನ್ನಭಾಗ್ಯ ಯೋಜನೆಯಿಂದ ಹಿಡಿದು, ಈತನಕ ಅನುಷ್ಟಾನಕ್ಕೆ ತಂದಿರುವ ಅನೇಕ ಯೋಜನೆಗಳು ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದೆ.
ಆಶ್ರಯ ಮನೆ ಸಾಲ ಸೇರಿದಂತೆ ವಿವಿಧ ಯೋಜನೆಯಡಿ ಅಲ್ಪಸಂಖ್ಯಾತರು, ಪರಿಶಿಷ್ಟಜಾತಿ, ಪರಿಶಿಷ್ಟವರ್ಗ, ಹಿಂದುಳಿದ ವರ್ಗದವರು ಮಾಡಿಕೊಂಡಿದ್ದ ಸುಮಾರು 4,500 ಕೋಟಿ ರೂ. ಸಾಲವನ್ನು ಮನ್ನಾ ಮಾಡುವ ಮೂಲಕ ಅವರನ್ನು ಸಾಲ ಮುಕ್ತರನ್ನಾಗಿಸಿದ ಹೆಗ್ಗಳಿಕೆ ರಾಜ್ಯ ಸರ್ಕಾರ ಹಾಗೂ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದರು.
ಬಡ ಜನರಿಗೆ ಉಚಿತ ಅಕ್ಕಿ ವಿತರಣೆ, 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ ಯೋಜನೆ ಕಲ್ಪಿಸುವ ಮೂಲಕ ಹಸಿವು ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಸಿದ್ದರಾಮಯ್ಯ ಅವರು ವಿಶೇಷ ಕಾಳಜಿ ವಹಿಸಿದ್ದಾರೆ. ಆಶ್ರಯ ಮನೆ ನಿರ್ಮಾಣಕ್ಕೆ ನೀಡುತ್ತಿದ್ದ ಸಹಾಯಧನವನ್ನು ಸಾಮಾನ್ಯ ವರ್ಗದವರಿಗೆ 75 ಸಾವಿರದಿಂದ 1.20 ಲಕ್ಷ ರೂ., ಹಿಂದುಳಿದ ವರ್ಗದವರಿಗೆ 1.50 ಲಕ್ಷ ರೂ., ಪರಿಶಿಷ್ಟ ಜನಾಂಗದವರಿಗೆ 1.75 ಲಕ್ಷ ರೂ. ನೀಡಲಾಗುತ್ತಿದ್ದು, ರಾಜ್ಯದಲ್ಲಿ ಸುಮಾರು 14 ಲಕ್ಷ ಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ. ದೂರದ ಊರುಗಳಿಂದ ಬರುವ ಹಾಗೂ ವಿದ್ಯಾರ್ಥಿ ನಿಲಯ ಸಿಗದ ವಿದ್ಯಾರ್ಥಿಗಳಿಗೆ ಮಾಹೆಯಾನ 1500 ರೂ. ಆರ್ಥಿಕ ಸಹಕಾರ ನೀಡಲಾಗುತ್ತಿದೆ. ಜನರಿಗೆ ಭೂಮಿ ಕೊಡುವ ಬಗ್ಗೆ ನಮ್ಮ ಸರ್ಕಾರ ವಿಶೇಷ ಗಮನ ಹರಿಸಿದ್ದು, ನಾನು ಕಂದಾಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಬಗರ್‌ಹುಕುಂಗೆ ಸಂಬಂಧಪಟ್ಟಂತೆ 5 ಲಕ್ಷ ಅರ್ಜಿ ವಿಲೇವಾರಿಯಾಗದೆ ಬಾಕಿ ಉಳಿದಿತ್ತು. ಕಳೆದ ಮಾರ್ಚ್ ಅಂತ್ಯಕ್ಕೆ 2.50 ಲಕ್ಷ ಅರ್ಜಿಯನ್ನು ವಿಲೇವಾರಿ ಮಾಡಲಾಗಿದ್ದು, ಉಳಿದ 2.50 ಲಕ್ಷ ಅರ್ಜಿಯನ್ನು ಶೀಘ್ರದಲ್ಲಿ ವಿಲೇವಾರಿ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ 94ಸಿ ಅಡಿ ಹಕ್ಕುಪತ್ರ ನೀಡುವ ಕೆಲಸ ತ್ವರಿತವಾಗಿ ಮುಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಕೆಲವರಿಗೆ ಯೋಜನೆಯ ಮಹತ್ವ ಗೊತ್ತಾಗಿಲ್ಲ. ತಾವು ವಾಸಿಸುವ ಭೂಮಿಯ ಮೇಲಿನ ಹಕ್ಕು ಎಷ್ಟು ಮಹತ್ವ ಎನ್ನುವ ಬಗ್ಗೆ ಜಾಗೃತಿ ಆಗಿಲ್ಲ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಹಾಗೂ ಪಿಡಿಒಗಳಿಗೆ ಸ್ಥಳಕ್ಕೆ ಹೋಗಿ ಜನರಿಗೆ ಜಾಗೃತಿ ಮೂಡಿಸಿ, ಅರ್ಜಿ ಪಡೆಯಲು ಸೂಚನೆ ನೀಡಲಾಗಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಇನ್ನೂ ಎರಡು ತಿಂಗಳು ವಿಸ್ತರಿಸಲಾಗಿದೆ ಎಂದು ವಿವರಿಸಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭೂಮಿ ಹಕ್ಕು ಕೊಡುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ನಡೆಸಲಾಗುತ್ತಿದೆ. ಭೂ ಮಂಜೂರಾತಿ ಕಾಯ್ದೆಯ ಪ್ರಕಾರ ಕೃಷಿಗೆ ಯೋಗ್ಯವಾದ ಭೂಮಿಯನ್ನು ಪಟ್ಟಿ ಮಾಡಲಾಗಿದ್ದು, ಅದನ್ನು ಮಂಜೂರು ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.