ಕುಂದಾಪುರ ರೌಡಿಶೀಟರ್ ಸೂರಿ ಕೊಲೆ ಪ್ರಕರಣ: ಬಿಬಿಎಂಪಿ ಮಾಜಿ ಸದಸ್ಯೆಯ ಸಂಬಂಧಿ ಬಂಧನ
Update: 2017-05-12 19:34 IST
ಬೆಂಗಳೂರು, ಮೇ 12: ಕುಂದಾಪುರದ ರೌಡಿಶೀಟರ್ ಸುರೇಶ್ ಕೊಲೆ ಪ್ರಕರಣ ಸಂಬಂಧ ಬಿಬಿಎಂಪಿಯ ಮಾಜಿ ಸದಸ್ಯೆಯ ಮೈದುನ ಸೇರಿ ಐವರನ್ನು ಇಲ್ಲಿನ ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿಬಿಎಂಪಿ ಮಾಜಿ ಸದಸ್ಯೆ ರೂಪಾ ರಮೇಶ್ ಅವರ ಮೈದುನ ನಾರಾಯಣ ಯಾನೆ ನರಿ, ರೌಡಿಶೀಟರ್ ಶ್ರೀಧರ್, ರಾಕೇಶ್‌ಗೌಡ ಸೇರಿ ಐವರು ಬಂಧಿತ ಆರೋಪಿಗಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಯನಗರ 7ನೆ ಬ್ಲಾಕ್‌ನ ಅಪಾರ್ಟ್‌ಮೆಂಟ್‌ನಲ್ಲಿ ಬಾಯಿಗೆ ಪ್ಲಾಸ್ಟರ್ ಹಾಕಿ ಸುರೇಶ್ ಯಾನೆ ಸೂರಿನನ್ನು ಕೊಲೆ ಮಾಡಿದ್ದ ಆರೋಪಿಗಳು ಗೋಣಿಚೀಲದಲ್ಲಿ ಶವ ತುಂಬಿ ಪರಾರಿಯಾಗಿದ್ದರು. ಸುರೇಶ್‌ಗೆ ಕರೆ ಮಾಡಿದರೂ ಸ್ವೀಕರಿಸದ ಕಾರಣ ಆತನ ಅಕ್ಕ ಮನೆಗೆ ಬಂದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು.
2007ರಿಂದ ಕುಂದಾಪುರ ಪೊಲೀಸ್ ಠಾಣೆ ರೌಡಿಶೀಟರ್ ಆಗಿದ್ದ ಸುರೇಶ್ ವಿರುದ್ಧ 18 ಪ್ರಕರಣಗಳು ದಾಖಲಾಗಿವೆ. ಬಂಧಿತ ಆರೋಪಿ ರಾಕೇಶ್‌ಗೌಡ ಮಂಗಳೂರಿನಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.