ಮಸೀದಿಯ ಆವರಣದೊಳಗೆ ನುಗ್ಗಿ ಗುಂಡು ಹಾರಿಸಿದ ಆರೋಪಿ ಸೆರೆ
ಮೂಡಿಗೆರೆ, ಮೇ.12: ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ಸಂದರ್ಭ ಮಸೀದಿಯ ಆವರಣದೊಳಗೆ ನುಗ್ಗಿದ ವ್ಯಕ್ತಿಯೋರ್ವ ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಭೀತಿಗೊಳಿಸಿದ ಘಟನೆ ಗುರುವಾರ ರಾತ್ರಿ ಬಿದರಹಳ್ಳಿಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಿದರಹಳ್ಳಿಯ ತೇಜಸ್ವಿ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಶಬೆ ಬರಾತ್ ಅಂಗವಾಗಿ ಗುರುವಾರ ರಾತ್ರಿ ಬಿದರಹಳ್ಳಿಯ ಮಸೀದಿ ಯಲ್ಲಿ ಸಾಮೂಹಿಕ ಪ್ರಾರ್ತನೆ ನಡೆಯುತ್ತಿತ್ತು. ಈ ಸಂದರ್ಭ ಆರೋಪಿ ಪ್ರಾರ್ಥನೆ ನಿಲ್ಲಿಸಿ ಮಸೀದಿಯಿಂದ ಹೊರ ಬರುವಂತೆ ಒತ್ತಾಯಿಸಿ ನಂತರ ಗಾಳಿಯಲ್ಲಿ ಗುಂಡು ಹಾರಿಸಿರುವುದಾಗಿ ದೂರಲಾಗಿದೆ.
ಗುಂಡು ಹಾರಾಟದ ಶಬ್ದ ಕೇಳಿದ ಜನರು ಭಯಭೀತರಾಗಿದ್ದು, ಮಸೀದಿ ಬಳಿಯ ದರ್ಗಾದ ಭದ್ರತೆಗೆ ನಿಯೋಜಿಸಲ್ಪಟ್ಟ ಪೊಲೀಸರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ ಮೂಡಿಗೆರೆ ವೃತ್ತ ನಿರೀಕ್ಷಕ ಜಗದೀಶ್ ಮತ್ತು ಪಿಎಸ್‌ಐ ರಫೀಕ್ ಆರೋಪಿಯನ್ನು ಬಂಧಿಸಿದರು. ಬಿದರಹಳ್ಳಿ ಜಾಮೀಯ ಮಸೀದಿ ಅಧ್ಯಕ್ಷ ಅಬ್ರಾರ್ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.
ಕೋಮುದ್ವೇಷದಿಂದ ಮಸೀದಿ ಆವರಣದೊಳಗೆ ಪ್ರವೇಶಿಸಿ ಪಿಸ್ತೂಲ್‌ನಿಂದ ಗುಂಡು ಹಾರಿಸಿರುವ ಕೃತ್ಯವನ್ನು ಮಲೆನಾಡು ಮುಸ್ಲಿಂ ವೇದಿಕೆಯ ಪದಾಧಿಕಾರಿಗಳು ಖಂಡಿಸಿದ್ದು, ಆರೋಪಿಯ ಪಿಸ್ತೂಲ್‌ಗೆ ಲೈಸೆನ್ಸ್ ಇದ್ದಲ್ಲಿ ತಕ್ಷಣ ರದ್ದುಪಡಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಮಸೀದಿ ಆವರಣದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.