ಅಪಾಯದಲ್ಲಿ ಸಿಲುಕಿದ ಸೈನಿಕರ ಪತ್ತೆಗೆ ವಿದ್ಯಾರ್ಥಿನಿಯರಿಂದ ಪ್ರಾಜೆಕ್ಟ್ ಆವಿಷ್ಕಾರ
ಕಾರವಾರ, ಮೇ 12: ಅಪಾಯದಲ್ಲಿ ಸಿಲುಕಿ ಸೈನಿಕರನ್ನು ಪತ್ತೆ ಹಚ್ಚಲು ಜಿಪಿಎಸ್ ಆಧಾರಿತ ಪ್ರಾಜೆಕ್ಟ್ ತಾಲೂಕಿನ ಮಾಜಾಳಿಯ ಗಿರಿಜಾಬಾಯಿ ಸೈಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಂತಿಮ ವರ್ಷದ ವಿದ್ಯಾರ್ಥಿನಿಯರು ಆವಿಷ್ಕರಿಸಿದ್ದಾರೆ.
ಕಾಲೇಜಿನಲ್ಲಿ ನಡೆದ ವಿವಿಧ ವಿಭಾಗದ ವಿಜ್ಞಾನ ವಸ್ತು ಪ್ರದರ್ಶನದ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಈ ಪ್ರಾಜೆಕ್ಟ್‌ಗೆ ಸಂಬಧಿಸಿದ ಚಿಪ್‌ವೊಂದನ್ನು ಸೈನಿಕ ಇರಿಸಿಕೊಂಡರೇ ಅವರಿರುವ ಸ್ಥಳದೊಂದಿಗೆ ಆತನ ಹೃದಯ ಬಡಿತ, ದೇಹದ ಉಷ್ಣತೆಯಲ್ಲಿನ ಏರುಪೇರುಗಳ ಮಾಹಿತಿಯನ್ನು ಸಹ ಕ್ಷಣಾರ್ಧದಲ್ಲಿ ಸೇನೆಯ ನಿರ್ವಾಹಕರ ಮೊಬೈಲಿಗೆ ರವಾನಿಸಲಿದೆ.
ಮಾಹಿತಿಯನ್ನು ಆಧರಿಸಿ ಸೈನಿಕರನ್ನು ಪತ್ತೆ ಹಚ್ಚುವ ಹಾಗೂ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಈ ಮಾದರಿ ಸಹಕಾರಿಯಾಗಲಿದೆ. ಈ ಪ್ರಾಜೆಕ್ಟ್ ಸಿದ್ಧ್ದಪಡಿಸಲು 5 ಸಾವಿರ ರೂ.ವೆಚ್ಚ ತಗುಲಿದೆ. ಚಿಪ್ ತಯಾರು ಮಾಡಿದ್ದಲ್ಲಿ ಅದನ್ನು ವಾಚ್, ಹೆಲ್ಮೆಟ್ ಹಾಗೂ ಸೇನೆಯ ಬ್ಯಾಚ್‌ಗಳಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.
ಇದರಲ್ಲಿ ತಾಪಮಾನ ಸಂವೇದಕ (ಟೆಂಪರೇಚರ್ ಸೆನ್ಸರ್), ಹೃದಯ ಬಡಿತ ಸಂವೇದಕ, ಜಿಪಿಎಸ್, ಜಿಎಮ್‌ಎಸ್ ಮಾಡ್ಯೂಲ್, ಸೂಕ್ಷ್ಮ ನಿಯಂತ್ರಕ (ಮೈಕ್ರೋ ಕಂಟ್ರೋಲರ್), ಎಲ್‌ಇಡಿ ಪರದೆಯನ್ನು ಅಳವಡಿಸಲಾಗಿದ್ದು, ಚಿಕ್ಕ ಬ್ಯಾಟರಿ ಮೂಲಕ ಇದು ಕಾರ್ಯನಿರ್ವಹಿಸಬಲ್ಲದು.
ಸಹಾಯಕ ಪ್ರಾಧ್ಯಾಪಕ ಸಂತೋಷ್ ಆನಂದ್ ಅವರ ಮಾರ್ಗದರ್ಶನದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ಶ್ವೇತಾ ಎಸ್. ನಾಯ್ಕ, ಮೇಘಾ ಆರ್. ವೆರ್ಣೇಕರ್, ನಿಧಿ ಡಿ. ನಾಯ್ಕ ಅವರು ಈ ಪ್ರಾಜೆಕ್ಟ್ ನ್ನು ಸಿದ್ದಪಡಿಸಿದ್ದು ಇದಕ್ಕೆ ‘24*7 ಸೈನಿಕರ ಲೈಫ್‌ಲೈನ್ ಚಿಪ್’ ಎಂದು ಹೆಸರಿಸಲಾಗಿದ್ದು, ಯಾವುದೇ ಪ್ರದೇಶದಲ್ಲಿಯೂ, ಯಾವುದೇ ಸಮಯದಲ್ಲಾದರೂ ಜಿಪಿಎಸ್ ಮೂಲಕ ಮೊಬೈಲ್‌ಗೆ ಮಾಹಿತಿ ರವಾನಿಸುವ ತಂತ್ರಾಂಶ ಇದು ಹೊಂದಿದೆ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ.
ಅದರಂತೆ ಅಂಧರಿಗಾಗಿ ಆಧುನಿಕ ತಂತ್ರಜ್ಞಾನದ ಊರುಗೋಲು, ಸ್ಮಾರ್ಟ್ ಸಿಟಿಗೆ ಪೂರಕವಾದ ಇಂಟರ್ನೆಟ್, ಮೌಸ್ ಇಲ್ಲದೇ ಅಂಗವಿಕಲರು ಬಳಸಬಹುದಾದ ಕಂಪ್ಯೂಟರ್ ಹಾಗೂ ಮೊಬೈಲ್ ಆ್ಯಪ್‌ಗಳ ಸಹಾಯದಿಂದ ರಸ್ತೆ ಸಂಚಾರ ನಿಯಂತ್ರಣ, ವಿದ್ಯುತ್ ಹಾಗೂ ನೀರಿನ ಮಿತ ಬಳಕೆಯ ಕುರಿತಾದ ಮಾದರಿಗಳು, ಸೋಲಾರ್ ಬಳಸಿ ಮೆಟ್ರೋ ರೈಲುಗಳು ಸಂಚಾರ ಮಾಡುವ ಮಾದರಿಗಳನ್ನು ವಿದ್ಯಾರ್ಥಿಗಳು ಆವಿಷ್ಕರಿಸಿದ್ದಾರೆ.
ಕಾಲೇಜಿನ ಮೆಕಾನಿಕಲ್, ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್, ಸಿವಿಲ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ಶ್ರಮವಿಟ್ಟು, ಉಪಯೋಗಕಾರಿ ಒಟ್ಟು 34 ಪ್ರಾಜೆಕ್ಟ್‌ಗಳನ್ನು ತಯಾರಿಸಿದ್ದರು. ಇವುಗಳಲ್ಲಿ ಆರು ಪ್ರಾಜೆಕ್ಟ್‌ಗೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಕೌನ್ಸಿಲ್ (ಕೆಎಸ್‌ಸಿಎಸ್‌ಟಿ) ವತಿಯಿಂದ ಪ್ರೋತ್ಸಾಹ ಧನ ಲಭಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ಡಿ.ಮಾನೆ ತಿಳಿಸಿದರು.