ಮುಸ್ಲಿಮರು ಹತಾಶರಾಗುವುದು ಬೇಡ: ಮೌಲಾನ ಮದನಿ
ಭಟ್ಕಳ, ಮೇ 12: ದೇಶದಲ್ಲಿನ ಪ್ರಸಕ್ತ ಬದಲಾಗುತ್ತಿರುವ ಸನ್ನಿವೇಶದಲ್ಲಿ ಮುಸ್ಲಿಮರು ಭಯ ಮತ್ತು ಹತಾಶಗೊಳ್ಳುವುದು ಬೇಡ, ಹತಾಶ ಸಮುದಾಯ ಹೆಣಕ್ಕೆ ಸಮ ಎಂದು ಜಮೀಯ್ಯತುಲ್ ಉಲೇಮಾ ಹಿಂದ್ ಪ್ರಧಾನ ಕಾರ್ಯದರ್ಶಿ ಮೌಲಾನ ಮುಹಮ್ಮದ್ ಮದನಿ ಹೇಳಿದ್ದಾರೆ.
ಅವರು ಗುರುವಾರ ರಾತ್ರಿ ಬಂದರ್ ರಸ್ತೆಯಲ್ಲಿರುವ ನವೀಕೃತ ಈದ್ಗಾ ಮೈದಾನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
‘ನಾವು ಕೇವಲ ನಮ್ಮ ಬಗ್ಗೆ ಮಾತ್ರ ಯೋಚಿಸುತ್ತೇವೆ. ಬೇರೊಬ್ಬರ ಕುರಿತು ಯೋಚಿಸುವುದನ್ನು ನಾವು ಬಿಟ್ಟಿದ್ದೇವೆ. ಇದರಿಂದಾಗಿ ನಮ್ಮ ಸಂಬಂಧಗಳಲ್ಲಿ ಬಿರುಕು ಉಂಟಾಗಿದ್ದು ಪರಸ್ಪರರಲ್ಲಿ ಭಿನ್ನಾಭಿಪ್ರಾಯ ಕಾಣಿಸತೊಡಗಿದೆ’ ಎಂದರು. ‘ನಾವು ನಮ್ಮ ಬಗ್ಗೆ ಯೋಚಿಸದೆ ಇತರರ ಕುರಿತು ಯೋಚನೆ ಮಾಡಿದಾಗ ನಮ್ಮಲ್ಲಿ ಅಗಾಧ ಬದಲಾವಣೆಗಳು ಉಂಟಾಗುತ್ತವೆ. ಪ್ರವಾದಿ ಮುಹಮ್ಮದ್ ಪೈಗಂಬರರು ತಮ್ಮ ಜೀವಿತಾವಧಿಯಲ್ಲಿ ಬೇರೆಯವರನ್ನು ಕುರಿತೆ ಚಿಂತಿಸುತ್ತಿದ್ದರು. ಅವರಿಗಾಗಿ ಪ್ರಾರ್ಥಿಸುತ್ತಿದ್ದರು. ನಾವಿಂದು ನಮ್ಮ ನೆರೆಹೊರೆಯಲ್ಲಿರುವ ಮುಸ್ಲಿಮೇತರ ಸಮುದಾಯದೊಂದಿಗೆ ಎಂತಹ ಸಂಬಂಧ ಇಟ್ಟು ಕೊಂಡಿದ್ದೇವೆ.
ಅವರಿಗಾಗಿ ನಮ್ಮ ಮನ ಎಂದಾದರೂ ಮಿಡಿಯಿತೇ? ಇಲ್ಲ ವೆಂದಾದರೆ ನಾವು ಪ್ರವಾದಿಯವರ ದಾರಿಯಲ್ಲಿ ನಡೆಯುತ್ತಿಲ್ಲ ಎಂದಾಗುತ್ತದೆ’ ಎಂದರು.
‘ನಾವು ಇತರರಿಗಾಗಿ ಮಿಡಿಯುವ ಹೃದಯವನ್ನು ಹೊಂದಬೇಕು. ಕಳೆದ ಐವತ್ತು ವರ್ಷಗಳಲ್ಲಿ ಮುಸ್ಲಿಮರಲ್ಲಿನ ಧಾರ್ಮಿಕತೆ ಜಾಗೃತಗೊಂಡಿದೆ. ನಮ್ಮಲ್ಲಿ ಶಿಕ್ಷಣವಿದೆ, ಹಣವಿದೆ, ಆದರೂ ನಾವು ಸಮಾಜದಲ್ಲಿ ನಗಣ್ಯರಾಗಿದ್ದೇವೆ. ಇದಕ್ಕಾಗಿ ನಮ್ಮನ್ನು ಅವಲೋಕನ ಮಾಡಿಕೊಳ್ಳುವ ಸಂದರ್ಭದ ಈಗ ಒದಗಿಬಂದಿದೆ. ನಾವು ಪ್ರವಾದಿಯವರ ಮಾರ್ಗದಲ್ಲಿ ನಡೆದು ತೋರಿಸಬೇಕು. ಹತಾಶೆ, ನಿರಾಶೆ ಹಾಗೂ ಭಯದಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.
ಜಮೀಯ್ಯತುಲ್ ಮುಸ್ಲಿಮೀನ್ ಪ್ರಧಾನಖಾಝಿ ಮೌಲಾನ ಮುಹಮ್ಮದ್‌ಇಕ್ಬಾಲ್ ಮುಲ್ಲಾ ನದ್ವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಅಲಿಮಿಯಾ ಇಸ್ಲಾಮಿಕ್ ಅಕಾಡಮಿ ಪ್ರಧಾನ ಕಾರ್ಯದರ್ಶಿ ಮೌಲಾನ ಮುಹಮ್ಮದ್‌ಇಲ್ಯಾಸ್ ನದ್ವಿ, ಜಾಮಿಯಾ ಮಸೀದಿಯ ಖತೀಬ್ ಮತ್ತು ಇಮಾಮ್ ಮೌಲಾನ ಅಬ್ದುಲ್‌ಅಲೀಮ್‌ಖತೀಬ್ ನದ್ವಿ ಸೇರಿದಂತೆ ಮತ್ತಿತರ ವಿದ್ವಾಂಸರು ಸಂದರ್ಭೋಚಿತವಾಗಿ ಮಾತನಾಡಿದರು.
ಮೌಲ್ವಿ ಶಫಿ ಮಲ್ಪಾ ಜಮಾಅತುಲ್ ಮುಸ್ಲಿಮೀನ್ ಸಂಸ್ಥೆಯನ್ನು ಪರಿಚಯಿಸಿದರು. ಮುಸ್ಲಿಮೀನ್ ಪ್ರಧಾನ ಕಾರ್ಯದರ್ಶಿ ಮೌಲಾನ ತಲ್ಹಾರುಕ್ನುದ್ದೀನ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು.
ಜಾಮಿಯಾ ಇಸ್ಲಾಮೀಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಮೌಲಾನ ಮಕ್ಬೂಲ್ ಆಹ್ಮದ್ ಕೋಬಟ್ಟೆ, ಜಮಾ ಅತುಲ್ ಮುಸ್ಲಿಮೀನ್ ಉಪಾಧ್ಯಕ್ಷ ಕಾದಿರ್ ಮೀರಾ ಪಟೇಲ್, ಮೌಲಾನ ಅಬ್ದುಲ್ ಅಲೀಮ್ ಖಾಸ್ಮಿ, ಮೌಲಾನ ಅಬ್ದುಲ್ ಅಝೀಮ್ ಕಾಜಿಯಾ, ಎಸ್.ಜೆ. ಸೈಯದ್ ಹಾಶಿಮ್ ಹಾಗೂ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.