ಮಂಗಳೂರಿಗೆ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನಕ್ಕೆ ಕೊಡ್ಲಿಪೇಟೆಯಲ್ಲಿ ಬೆಂಕಿ
# ಪೊಲೀಸರ ಬೈಕ್‌ಗೆ ಢಿಕ್ಕಿ ಹೊಡೆದು ಪರಾರಿಯಾಗಲು ವಿಫಲ ಯತ್ನ
ಕೊಡಗು, ಮೇ 13: ಜಿಲ್ಲೆಯ ತೊರೆನೂರ ಎಂಬಲ್ಲಿಂದ ಮಂಗಳೂರಿಗೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಶನಿವಾರಪೇಟೆ ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ. ಇದೇ ವೇಳೆ ದನ ಸಾಗಾಟದ ಟೆಂಪೊ ಟ್ರಾವೆಲ್‌ಗೆ ಸಾರ್ವಜನಿಕರು ಬೆಂಕಿಹಚ್ಚಿದ ಘಟನೆಯೂ ವರದಿಯಾಗಿದೆ.
ಜಾನುವಾರ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಮೂಲದ ಶರೀಫ್ ಹಾಗೂ ಮನ್ಸೂರ್ ಬಂಧಿತ ಆರೋಪಿಗಳಾಗಿದ್ದಾರೆ. ತೊರೆನೂರು ಬಳಿ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಟೆಂಪೊ ಟ್ರಾವೆಲ್ ಅನ್ನು ಪೊಲೀಸರು ನಿಲ್ಲಿಸಲು ಸೂಚಿಸಿದಾಗ ಆರೋಪಿಗಳು ನಿಲ್ಲಿಸದೆ ಪರಾರಿಯಾದರೆನ್ನಲಾಗಿದೆ. ಈ ವೇಳೆ ಬೆನ್ನಟ್ಟಿದ ಪೊಲೀಸರ ಬೈಕ್ ಗೆ ಟೆಂಪೊವನ್ನು ಢಿಕ್ಕಿ ಹೊಡೆಯಲು ಯತ್ನಿಸಿದರೆನ್ನಲಾಗಿದೆ. ಬಳಿಕ ಸುಮಾರು 20 ಕಿ.ಮೀ. ದೂರದ ಕೊಡ್ಲಿಪೇಟೆಯ ಬಳಿ ಟೆಂಪೊವನ್ನು ತಡೆದು ನಿಲ್ಲಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಬಂಧಿಸಿ ಅದರಲ್ಲಿದ ಜಾನುವಾರುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದೇ ವೇಳೆ ಸ್ಥಳದಲ್ಲಿ ಸೇರಿದ ಕೆಲವರು ಟೆಂಪೊಗೆ ಬೆಂಕಿ ಹಚ್ಚಿದ ಘಟನೆಯೂ ನಡೆದಿರುವುದು ವರದಿಯಾಗಿದೆ.
ಘಟನೆಯಲ್ಲಿ ಪೊಲೀಸರ ಬೈಕೊಂದು ಜಖಂಗೊಂಡಿದೆ. ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.