×
Ad

ಸಿದ್ದರಾಮಯ್ಯ ನೇತೃತ್ವದಲ್ಲಿ ಮುಂದಿನ ಚುನಾವಣೆ : ಡಾ.ಜಿ.ಪರಮೇಶ್ವರ್

Update: 2017-05-13 19:21 IST

ಚಿತ್ರದುರ್ಗ, ಮೇ 13: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲೆ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸಲಾಗುವುದು. ಈ ಬಗ್ಗೆ ಯಾರಿಗೂ ಗೊಂದಲ ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಘೋಷಿಸಿದ್ದಾರೆ.

ಶನಿವಾರ ನಗರದ ವಿಜ್ಞಾನ ಕಾಲೇಜು ಮೈದಾನದಲ್ಲಿ ಬೆಂಗಳೂರು ಕಂದಾಯ ವಿಭಾಗದ 9 ಜಿಲ್ಲೆಗಳ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಆಯೋಜಿಸಲಾಗಿದ್ದ ಸೌಲಭ್ಯ ವಿತರಣೆಯ ಸಂಭ್ರಮ(ಜನರಿಗೆ ಮನನ-ಜನರಿಗೆ ನಮನ) ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

2013ರ ಚುನಾವಣೆಯಲ್ಲಿ ರಾಜ್ಯದ ಜನತೆಗೆ ಸ್ವಚ್ಛ ಆಡಳಿತ, ಸಮರ್ಥ ನಾಯಕತ್ವದ ವಾಗ್ದಾನದೊಂದಿಗೆ ನಾವು ಅಧಿಕಾರಕ್ಕೆ ಬಂದೆವು. ಅದೇ ರೀತಿ ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಲಕ ಸಮರ್ಥ ನಾಯಕತ್ವವನ್ನು ನೀಡಿದ್ದೇವೆ ಎಂದು ಪರಮೇಶ್ವರ್ ಹೇಳಿದರು.

ನಮ್ಮ ಸರಕಾರದ ಅವಧಿಯಲ್ಲಿ ಯಾವ ಸಚಿವರ ವಿರುದ್ಧವು ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿಲ್ಲ. ಯಾರೂ ಜೈಲಿಗೆ ಹೋಗಿಲ್ಲ, ಜಾಮೀನಿನ ಮೇಲೆ ತಿರುಗಾಡುತ್ತಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಮಂಡಿಸಿದ ಐದು ಬಜೆಟ್‌ಗಳಲ್ಲಿ ರಾಜ್ಯದ ಜನರ ಅಭಿವೃದ್ಧಿಗೆ 7.50 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದು ಅವರು ತಿಳಿಸಿದರು.

ನೀರಾವರಿಗೆ ಐದು ಬಜೆಟ್‌ಗಳಲ್ಲಿ 64 ಸಾವಿರ ಕೋಟಿ ರೂ.ಅನುದಾನ ಒದಗಿಸಿದ್ದೇವೆ. ಎಸ್ಸಿ-ಎಸ್ಟಿಗಳಿಗೆ ಬಿಜೆಪಿ ಸರಕಾರದ ಐದು ವರ್ಷಗಳ ಆಡಳಿತಾವಧಿಯಲ್ಲಿ ಕೇವಲ 20 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿತ್ತು. ನಮ್ಮ ಸರಕಾರ 60,360 ಕೋಟಿ ರೂ.ಗಳನ್ನು ಒದಗಿಸಿದೆ ಎಂದು ಪರಮೇಶ್ವರ್ ಹೇಳಿದರು.

ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರವೇ ನಮ್ಮ ಸಚಿವರಾದ ಡಿ.ಕೆ.ಶಿವಕುಮಾರ್, ಉಮಾಶ್ರೀ, ಎಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ ಸೇರಿದಂತೆ ಇನ್ನಿತರರಿಗೆ ಉತ್ತಮ ಕಾರ್ಯಕ್ಕಾಗಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಆದರೆ, ಇಲ್ಲಿರುವ ಬಿಜೆಪಿ ನಾಯಕರಿಗೆ ಅದು ಯಾವುದೂ ಕಾಣದಿರುವುದು ವಿಪರ್ಯಾಸ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News