ಕನ್ನಡದಲ್ಲಿ ಡಬ್‌ಗೆ ಅವಕಾಶ ನೀಡಿದರೆ ಒಳ್ಳೆಯದು: ರಾಜಮೌಳಿ
ಬಳ್ಳಾರಿ, ಮೇ 13: ತಮಿಳು, ತೆಲುಗು ಮತ್ತಿತರೆ ಭಾಷೆಗಳಂತೆ ಕನ್ನಡದಲ್ಲೂ ಪರಭಾಷಾ ಚಿತ್ರಗಳ ವಾಯ್ಸಿ ಡಬ್ ಮಾಡಲು ಅವಕಾಶ ನೀಡಿದರೆ ಒಳ್ಳೆಯದು ಎಂದು ನಿರ್ದೇಶಕ ರಾಜಮೌಳಿ ಹೇಳಿದ್ದಾರೆ.
ಶನಿವಾರ ಬಳ್ಳಾರಿಯ ರಾಧಿಕ ಚಿತ್ರಮಂದಿರದಲ್ಲಿ ಬಾಹುಬಲಿ ಸಿನಿಮಾ ವೀಕ್ಷಣೆ ಮಾಡಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಾಹುಬಲಿ 1 ಮತ್ತು ಬಾಹುಬಲಿ 2 ಮೇಕಿಂಗ್ ಉತ್ತಮವಾಗಿದೆ ಎಂದರು.
ಬಾಹುಬಲಿ2 ಸಿನಿಮಾ ಕಲೆಕ್ಷನ್ ಎಷ್ಟು ಎನ್ನುವುದು ಎಲ್ಲರಿಗೂ ತಿಳಿದಿದೆ. ನಾನು ಕಲೆಕ್ಷನ್ ಬಗ್ಗೆ ಮಾತನಾಡುವುದಿಲ್ಲ. ಚಿತ್ರ ಯಶ್ವಸಿಯಾ ಗಿರುವುದರಿಂದ ಬಹಳ ಸಂತೋಷವಾಗಿದೆ. ಸದ್ಯಕ್ಕೆ ಕೈಯಲ್ಲಿ ಯಾವುದೇ ಪ್ರಾಜೆಕ್ಟ್ ಇಲ್ಲ. ಕೆಲ ದಿನಗಳ ಕಾಲ ವಿಶ್ರಾಂತಿ ಮಾಡುವೆ ಎಂದರು.
ಬಾಹುಬಲಿ ಚಿತ್ರದ ಕಥೆ, ಪಾತ್ರಗಳ ಪ್ರೇರಣೆಯಿಂದಲೇ ನಾನು ಚಿತ್ರ ನಿರ್ಮಾಣ ಮಾಡಿದೆ. ನನ್ನ ನಿರೀಕ್ಷೆಯಂತೆ ಚಿತ್ರ ಮೂಡಿ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಡಬ್ಬಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜಮೌಳಿ, ಕರ್ನಾಟಕದಲ್ಲಿ ಡಬ್ಬಿಂಗ್ ವಿರುದ್ಧವಾಗಿ ವಾಣಿಜ್ಯ ಮಂಡಳಿಯಲ್ಲಿ ತೀರ್ಮಾನವಿದೆ. ಡಬ್ಬಿಂಗ್ ಮಾಡಿದ್ರೆ ಚೆನ್ನಾಗಿರುತ್ತದೆ. ಆದ್ರೆ ಕನ್ನಡ ಇಂಡಸ್ಟ್ರಿ ಒಪ್ಪುತ್ತಿಲ್ಲ.
ಪ್ರಾದೇಶಿಕ ಭಾಷೆಗಳ ಡಬ್ಬಿಂಗ್‌ಗೆ ಅವಕಾಶ ನೀಡಿದರೆ ಒಳ್ಳೆಯದಾಗುತ್ತೆ ಎಂದರು. ಕಾನೂನು ಎಷ್ಟು ಗಟ್ಟಿಯಾಗಿದ್ದರೂ ಪೈರಸಿಯಾಗುತ್ತಿದೆ. ಪೈರಸಿ ಹಾಲಿವುಡ್‌ಗೂ ದೊಡ್ಡ ಸಮಸ್ಯೆಯಾಗಿದೆ. ಪೈರಸಿ ಸಮಸ್ಯೆ ಮುಗಿಯದ ಕಥೆ. ಕಾನೂನು ಬಿಗಿಯಾಗಬೇಕು. ಪೈರಸಿಗೆ ಜನರೇ ಸ್ಪಂದಿಸಬಾರದು ಎಂದರು.