ರಾಷ್ಟ್ರದ ಅಭಿವೃದ್ಧಿಗೆ ಸಹಕಾರ ಕ್ಷೇತ್ರದ ಕೊಡುಗೆ ಅನನ್ಯ: ವಜೂಭಾಯಿ ವಾಲಾ

Update: 2017-05-13 17:29 GMT

ಕಾರವಾರ, ಮೇ 13: ರಾಷ್ಟ್ರದ ಅಭಿವೃದ್ಧಿಗೆ ಸಹಕಾರ ಕ್ಷೇತ್ರ ಅಪಾರವಾದ ಕೊಡುಗೆಯನ್ನು ನೀಡಿದ್ದು, ಉದ್ಯೋಗಾವಕಾಶಗಳ ಸೃಷ್ಟಿಯ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ರಾಜ್ಯಪಾಲ ವಜೂಭಾಯಿ ವಾಲಾ ಹೇಳಿದ್ದಾರೆ.


ಅವರು ಶನಿವಾರ ಶಿರಸಿಯಲ್ಲಿ, ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್‌ನ ಶತೋತ್ತರ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಹಕಾರ ಕ್ಷೇತ್ರ ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯ ಗಳಲ್ಲಿ ಬಲಿಷ್ಠವಾಗಿ ಬೆಳೆದಿದೆ. ಇದೇ ರೀತಿ ದೇಶದ ಎಲ್ಲಾ ಕಡೆಗಳಲ್ಲೂ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸುವ ಅಗತ್ಯವಿದೆ ಎಂದರು.


 ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ವಿಭಿನ್ನವಾಗಿ ಸಹಕಾರ ಕ್ಷೇತ್ರ ಸೇವೆಯನ್ನೇ ಧ್ಯೇಯವಾಗಿಸಿ ಕಾರ್ಯನಿರ್ವಹಿಸುತ್ತಿದೆ. ಸಹಕಾರ ವಲಯದ ಬ್ಯಾಂಕ್‌ಗಳು ಅರ್ಹರಿಗೆ ಉದ್ಯೋಗಾವಕಾಶ ಕಲ್ಪಿಸಲು ಬಂಡವಾಳ ನೀಡುವ ಮೂಲಕ ಸಾವಿರಾರು ಜನರಿಗೆ ಜೀವನ ಕಟ್ಟಿಕೊಟ್ಟಿವೆ. ರಾಷ್ಟ್ರೀಯತೆಯ ಭಾವನೆಯಿಂದ ಸಹಕಾರ ಕ್ಷೇತ್ರ ನಿರಂತರವಾಗಿ ಕಾರ್ಯನಿರ್ವಹಿಸಬೇಕು ಎಂದರು. ಸಹಕಾರ ಕ್ಷೇತ್ರಕ್ಕೆ ನಿರಂತರ ನೆರವು, ಪ್ರೋತ್ಸಾಹದ ಅಗತ್ಯವಿದೆ. ಸರಕಾರದಲ್ಲಿ ಸಹಕಾರಿ ಕ್ಷೇತ್ರದ ಪ್ರಾತಿನಿಧ್ಯ ಹೆಚ್ಚಾಗಬೇಕು.


 ಈ ಮೊದಲು ಸಹಕಾರ ಕ್ಷೇತ್ರದಲ್ಲಿ ಆದಾಯ ತೆರಿಗೆ ವಿನಾಯಿತಿ ಇತ್ತು. ಆದರೆ ನಿಯಮಾವಳಿಗೆ ತಿದ್ದುಪಡಿ ತಂದು ಸಹಕಾರ ಕ್ಷೇತ್ರವನ್ನು ಸಹ ಆದಾಯ ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಇದರಿಂದ ಈ ಕ್ಷೇತ್ರದಲ್ಲಿ ತೊಂದರೆ ಉಂಟಾಗಿದ್ದು, ಸಹಕಾರ ಕ್ಷೇತ್ರವನ್ನು ಆದಾಯ ತೆರಿಗೆ ವ್ಯಾಪ್ತಿಯಿಂದ ಮತ್ತೆ ಹೊರಗಿರಿಸಲು ಎಲ್ಲರೂ ಒಗ್ಗಟ್ಟಿನ ಧ್ವನಿ ಎತ್ತಬೇಕಾದ ಅಗತ್ಯವಿದೆ ಎಂದು ರಾಜ್ಯಪಾಲರು ಅಭಿಪ್ರಾಯ ವ್ಯಕ್ತಪಡಿಸಿದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಹಾಗೂ ಮೂಲಸೌಲಭ್ಯ ಖಾತೆ ಸಚಿವ ಆರ್. ವಿ. ದೇಶಪಾಂಡೆ ಮಾತನಾಡಿ, ಜಿಲ್ಲೆಯಲ್ಲಿ ಸಹಕಾರ ಸಂಘಗಳು ಬಲಿಷ್ಠವಾಗಿವೆ. ಇಲ್ಲಿಯ ಸಹಕಾರ ಕ್ಷೇತ್ರದಲ್ಲಿ ಯಾವುದೇ ಕಳಂಕವಿಲ್ಲದಂತೆ ಸಂಸ್ಥೆಗಳು ಮುನ್ನಡೆಯುತ್ತಿವೆ. ಸಹಕಾರಿ ಬ್ಯಾಂಕ್‌ಗಳು ಗೃಹ ಕೈಗಾರಿಕೆಯಂಥ ಸಣ್ಣ ಉದ್ದಿಮೆಗಳನ್ನು ಆರಂಭಿಸಲು ಯುವಕರಿಗೆ, ಮಹಿಳೆಯರಿಗೆ ಹೆಚ್ಚಿನ ಆರ್ಥಿಕ ನೆರವು ಒದಗಿಸಲು ಮುಂದೆ ಬರಬೇಕು ಎಂದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್ ಅವರು ಮಾತನಾಡಿ, ಲಾಭ ಗಳಿಕೆಗಿಂತ ಹೆಚ್ಚಾಗಿ ಸೇವಾ ಮನೋಭಾವದಿಂದ ಸಹಕಾರ ಕ್ಷೇತ್ರ ಕಾರ್ಯ ನಿರ್ವಹಿಸುತ್ತಿದ್ದು, ಒಂದು ಪರಿವಾರದ ವಾತಾವರಣ ಈ ಕ್ಷೇತ್ರದಲ್ಲಿದೆ. ಸ್ವಯಂ ಉದ್ಯೋಗ ಕಲ್ಪಿಸಲು ಸಹಕಾರ ಬ್ಯಾಂಕ್‌ಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News