4 ಲಕ್ಷ ರೂ.ಪರಿಹಾರಕ್ಕೆ ಸೂಚನೆ: ಮಹೇಶ್
ಕಡೂರು, ಮೇ 13: ತಾಲೂಕಿನ ದೊಡ್ಡಪಟ್ಟಣಗೆರೆ ಬಳಿಯ ಕುರುಬಗೆರೆ ಗ್ರಾಮದಲ್ಲಿ ಶುಕ್ರವಾರ ಸಂಜೆ ಅರುಣ(24) ಮತ್ತು ಆಶಾ(28) ಎಂಬವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಕುರಿ ಸಹಕಾರ ಸಂಘದ ಅಧ್ಯಕ್ಷ ಎ.ಎನ್.ಮಹೇಶ್, ಜಿಪಂ ಸದಸ್ಯ ಕೆ.ಆರ್.ಮಹೇಶ್ ಒಡೆಯರ್, ತಾಪಂ ಸದಸ್ಯ ತಿಮ್ಮಯ್ಯ, ಎಪಿಎಂಸಿ ಅಧ್ಯಕ್ಷ ಮಚ್ಚೇರಿ ಓಂಕಾರಪ್ಪ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಆನಂದ್, ಬೀರೂರು-ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎಂ. ವಿನಾಯಕ್ ಹಾಗೂ ಎಂ.ಎಚ್. ಚಂದ್ರಪ್ಪ ಭೇಟಿ ನೀಡಿ ಪಾರ್ಥಿವ ಶರೀರಗಳ ದರ್ಶನ ಪಡೆದರು.
ಈ ಸಂದಭರ್ದಲ್ಲಿ ಎ.ಎನ್. ಮಹೇಶ್ ಮಾತನಾಡಿ, ಸಿಡಿಲು ಬಡಿದು ಸಾವಪ್ಪಿರುವ ಎರಡೂ ಕುಟುಂಬಗಳಿಗೆ 4ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ. ಸ್ಥಳದಲ್ಲಿ ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ. ಕೆಂಚಪ್ಪ, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಸತ್ಯನಾರಾಯಣ, ಗ್ರಾಮದ ಮುಖಂಡರಾದ ಜಿಗಣೆಹಳ್ಳಿ ನೀಲಕಂಠಪ್ಪ, ಜಗದೀಶ, ದಲಿತ ಮುಖಂಡ ನಾರಾಯಣಮೂರ್ತಿ, ಸಗುನಪ್ಪ ಮತ್ತಿತರಿದ್ದರು.