ಪ್ರಧಾನಿ ಮೋದಿಗೆ ರಾಜ್ಯದ ರೈತರ ಸಂಕಷ್ಟದ ಅರಿವಿಲ್ಲ: ಸಿಎಂ
ಚಿತ್ರದುರ್ಗ: ಸೌಲಭ್ಯ ವಿತರಣೆ ಕಾರ್ಯಕ್ರಮ ಚಿತ್ರದುರ್ಗ ಮೇ 13: ಕೇಂದ್ರ ಸರಕಾರ ತನ್ನ ಪಾಲಿನ ಶೇಕಡಾ 50ರಷ್ಟು ಸಾಲವನ್ನು ಮನ್ನಾ ಮಾಡಿದರೆ ರಾಜ್ಯದ ಪಾಲನ್ನು ತಾವು ಮನ್ನಾ ಮಾಡಲು ಬದ್ಧ. ಈ ಮಾತಿಗೆ ಎಂದಿಗೂ ತಪ್ಪುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರ್ ಉಚ್ಚರಿಸಿದ್ದಾರೆ.
ಸರಕಾರ ಅಸ್ತಿತ್ವಕ್ಕೆ ಬಂದು ನಾಲ್ಕು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ನಗರದ ಸರಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಸೌಲಭ್ಯಗಳ ವಿತರಣೆಯೇ ಸಂಭ್ರಮ ‘ಜನರಿಗೆ ಮನನ - ಜನರಿಗೆ ಮನನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಚುನಾವಣಾ ಪೂರ್ವದಲ್ಲಿ ನೀಡಿದ್ದ 165 ಭರವಸೆಗಳಲ್ಲಿ 155 ಭರವಸೆಗಳನ್ನು ಈಡೇರಿಸಲಾಗಿದೆ.
ಮತದಾರರು ಸಹ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಮಹದಾಯಿ ವಿಚಾರ ಹಾಗೂ ಸಾಲಮನ್ನಾ ಮಾಡುವ ವಿಚಾರದಲ್ಲಿ ಪ್ರಧಾನಿ ಬಳಿಗೆ ನಿಯೋಗ ಕರೆದುಕೊಂಡ ಹೋದ ಸಂದಭರ್ದಲ್ಲಿ ಯಡಿಯೂರಪ್ಪಸೇರಿದಂತೆ ಯಾವ ನಾಯಕರು ತುಟಿ ಬಿಚ್ಚಲಿಲ್ಲ. ಪ್ರಧಾನಿಗೆ ಪತ್ರ ಬರೆದರೂ ಉತ್ತರ ನೀಡಿಲ್ಲ. ಈಗ ಸಾಲ ಮನ್ನಾ ಮಾಡಿ ಎಂದು ಬೊಗಳೆ ಬಿಡುತ್ತಾರೆ. ಯಡಿಯೂರಪ್ಪಮುಖ್ಯಮಂತ್ರಿಯಾಗಿದ್ದಾಗ ಸಾಲಮನ್ನಾ ಮಾಡುವಂತೆ ಉಗ್ರಪ್ಪ ಕೇಳಿದ ಪ್ರಶ್ನೆಗೆ ನೋಟ್ ಮುದ್ರಿಸುವ ಯಂತ್ರ ಇಲ್ಲ ಎಂದು ಹೇಳಿದ್ದಾರೆ. ಈಗ ಸಾಲಮನ್ನಾ ಮಾಡುವಂತೆ ಒತ್ತಾಯಿಸುತ್ತಾರೆ. ಯಡಿಯೂರಪ್ಪಗೆ ಎರಡು ನಾಲಿಗೆ ಇದೆಯೇ ಎಂದು ಲೇವಡಿ ಮಾಡಿದರು. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರ ಹೆಚ್ಚಿಸಲಿಲ್ಲ.
ಅಂಗನವಾಡಿ ಕಾರ್ಯಕರ್ತೆ ಯರಿಗೆ ಗೌರವ ಧನ ಏರಿಕೆ ಮಾಡಲಿಲ್ಲ. ಇವುಗಳನ್ನು ಮಾಡಿದ್ದು ನಮ್ಮ ಸರಕಾರ ಎಂದು ಹೇಳಿದರು.
ಕೇಂದ್ರ ಸರಕಾರ ತನ್ನ ಪಾಲಿನ ಶೇಕಡಾ 50ರಷ್ಟು ಸಾಲಮನ್ನಾ ಮಾಡಿದರೆ ರಾಜ್ಯದ ಪಾಲನ್ನು ತಾವು ಮನ್ನಾ ಮಾಡಲು ಬದ್ಧ್ದ್ದ. ಈ ಮಾತಿಗೆ ಎಂದಿಗೂ ತಪ್ಪುವುದಿಲ್ಲ. ಉತ್ತರಪ್ರದೇಶದಲ್ಲಿ ಸಾಲಮನ್ನಾ ಎನ್ನುವ ಮೋದಿ ಅವರಿಗೆ ಕರ್ನಾಟಕ ರೈತರ ಸಂಕಷ್ಟದ ಅರಿವು ಇಲ್ಲವೇ? ಒಂದು ಕಣ್ಣಿಗೆ ಬೆಣ್ಣೆ ಕರ್ನಾಟಕದ ಕಣ್ಣಿಗೆ ಸುಣ್ಣ ಸರಿಯೇ ಎಂದು ಪ್ರಶ್ನಿಸಿದರು. ಶಾಸಕರಾದ ರಘುಮೂರ್ತಿ, ಸುಧಾಕರ್, ಬಿ.ಜಿ.ಗೋವಿಂದಪ್ಪ, ತಿಪ್ಪೇಸ್ವಾಮಿ, ಎನ್.ವೈ.ಗೋಪಾಲಕೃಷ್ಣ, ಅಬ್ದುಲ್ ಜಬ್ಬಾರ್, ಜಯಮ್ಮ ಬಾಲರಾಜ್, ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ, ಎಚ್.ಎಂ.ರೇವಣ್ಣ, ರಾಮಕೃಷ್ಣ, ವಡ್ನಾಲ್ ರಾಜಣ್ಣ, ರಾಜೇಂದ್ರಸಿಂಗ್ ಬಾಬು, ಜಿ.ಪಂ. ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮತ್ತಿತರರು ಭಾಗವಹಿಸಿದ್ದರು.