×
Ad

ಸಾಗರ-ಬೆಂಗಳೂರು ಸುಖಾಸೀನ ಐರಾವತ ಬಸ್‌ಗೆ ಚಾಲನೆ

Update: 2017-05-13 23:26 IST

ಸಾಗರ, ಮೇ 13: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ನೀಡುತ್ತಿದೆ. ರಾಜ್ಯ ಸರ್ಕಾರ ಕೆ.ಎಸ್.ಆರ್.ಟಿ.ಸಿ. ಅಭಿವೃದ್ದಿಗೆ ಬೇಕಾದ ಎಲ್ಲ ಸವಲತ್ತುಗಳನ್ನು ನೀಡುತ್ತಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಶುಕ್ರವಾರ ಸಾಗರ-ಬೆಂಗಳೂರು ಸುಖಾಸೀನ ಐರಾವತ ಬಸ್‌ಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಖಾಸಗಿ ಬಸ್‌ಗಳ ಸ್ಪರ್ಧೆಯ ನಡುವೆಯೂ ಕೆ.ಎಸ್.ಆರ್.ಟಿ.ಸಿ. ಬಸ್ ಉತ್ತಮ ಸಾರಿಗೆ ಸೌಲಭ್ಯವನ್ನು ನೀಡಿ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಈಗಾಗಲೆ ರಾಜ್ಯದ ಎಲ್ಲ ಭಾಗಗಳಲ್ಲಿ ಸರ್ಕಾರಿ ಬಸ್ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ನೌಕರರು ಸಹ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಸಾಗರ ಹಾಗೂ ಜೋಗ್‌ಫಾಲ್ಸ್, ಜೋಗದಿಂದ ಸಾಗರ ಮೂಲಕ ಮಂಗಳೂರಿಗೆ ನೂತನ ಬಸ್ ಸೌಲಭ್ಯ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೆ ಶಿವಮೊಗ್ಗದಿಂದ ಸಾಗರಕ್ಕೆ ಎರಡು ಬಸ್ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಇನ್ನೂ ನಾಲ್ಕು ಪರ್ಮಿಟ್‌ಗಳು ಇರುವುದರಿಂದ ಹೆಚ್ಚುವರಿ ಬಸ್‌ಗಳನ್ನು ಬಿಡುವಂತೆ ಸಾರಿಗೆ ಸಚಿವರಿಗೆ ಮನವಿ ಮಾಡಲಾಗಿದೆ ಎಂದರು.

ಕೆ.ಎಸ್.ಆರ್.ಟಿ.ಸಿ. ಹಾಗೂ ರೈಲ್ವೆ ನಿಲ್ದಾಣದ ಪಕ್ಕದಲ್ಲಿ ಖಾಸಗಿ ಬಸ್ ನಿಲ್ದಾಣ ಸ್ಥಾಪಿಸುವ ಬಗ್ಗೆ ಪ್ರಸ್ತಾಪವಿದೆ. ಈಗಾಗಲೆ ನಗರಸಭೆ ವತಿಯಿಂದ ಯೋಜನೆ ಕುರಿತು ಚಟುವಟಿಕೆ ನಡೆಯುತ್ತಿದೆ. ಇದನ್ನು ಶೀಘ್ರ ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಜಾಗವನ್ನು ವಶಪಡಿಸಿಕೊಳ್ಳುವ ಬಗ್ಗೆ ಸಹ ಗಮನ ಹರಿಸಲಾಗಿದೆ ಎಂದರು.

ಈ ಸಂದರ್ಭ ಡಿಪೋ ಮ್ಯಾನೇಜರ್ ರಾಜಪ್ಪ, ಪರಶುರಾಮ್, ಡಿ.ವೈ.ಎಸ್.ಪಿ. ಮಂಜುನಾಥ ಕೌರಿ, ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಎಲ್.ಜನಾರ್ದನ್, ಪಿಡಬ್ಲ್ಯೂಡಿ ಸಹಾಯಕ ಅಭಿಯಂತರ ಟಿ.ಪಿ.ರಮೇಶ್ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News