ಭಾರತವು ಬೃಹತ್ ಕ್ರೀಡಾ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ... ಕ್ರೀಡಾಪಟುಗಳನ್ನಲ್ಲ!

Update: 2017-05-14 09:04 GMT

ಬಹುಶಃ ಈ ವಿದ್ಯಮಾನ ಕ್ರೀಡಾಸಕ್ತರೆಲ್ಲರ ಗಮನಕ್ಕೆ ಬಂದಿರುತ್ತದೆ. ವಿಶ್ವ ಕ್ರೀಡಾ ನಕ್ಷೆಯ ತಳ ಸಮುದಾಯದಲ್ಲಿ ಸಿಲುಕಿ ನರಳುತ್ತಿರುವ ಭಾರತವು ಮೈಕೊಡವಿಕೊಂಡು ಎದ್ದೇಳುವುದು ಯಾವಾಗ ಎಂಬ ಪ್ರಶ್ನೆಗೆ ತಕ್ಷಣದಲ್ಲಿ ಉತ್ತರ ಸಿಗುವಂತೆ ಕಾಣುತ್ತಿಲ್ಲ.

ಭಾರತದ ವಿಸ್ತೀರ್ಣ, ಜನಸಂಖ್ಯೆ, ಆರ್ಥಿಕ ಶಕ್ತಿ, ತಂತ್ರಜ್ಞಾನ ಇವುಗಳೊಂದಿಗೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ನಾವು ಪಡೆಯುತ್ತಿರುವ ಪದಕಗಳ ಸಂಖ್ಯೆಯನ್ನು ಹೋಲಿಸಿ ನೋಡಿದರೆ ಅದರ ಅನುಪಾತ ಸರಿ ಇಲ್ಲ ಎಂದು ತಿಳಿಯುತ್ತದೆ. ಭಾರತದಲ್ಲಿನ ಈಗಿನ ಯುವಜನರ ಸಂಖ್ಯೆ 50 ಕೋಟಿಯಷ್ಟಿದೆ ಅನ್ನುತ್ತಾರೆ. ಆದರೆ ಇವರಲ್ಲಿ ವಿಶ್ವಮಟ್ಟದಲ್ಲಿ ಸ್ಪರ್ಧೆಯೊಡ್ಡಬಲ್ಲ ಒಂದು ನೂರು ಜನರೂ ಇಲ್ಲ ಎಂಬುದು ಸತ್ಯ ಸಂಗತಿಯಾಗಿದೆ. ಸಮಸ್ಯೆಯನ್ನು ಎದುರಿಸಲು ಹಲವು ಸಮಿತಿಗಳನ್ನು ರಚಿಸಿ, ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದರೂ ಭಾರತದ ಯುವಜನರು ತಾವಿರುವ ಕ್ರೀಡಾ ಪಾತಾಳದಿಂದ ಮೇಲೆದ್ದು ಬರಲಾಗುತ್ತಿಲ್ಲ. ಇದಕ್ಕೆ ನೂರಾರು ಕಾರಣಗಳಿರಬಹುದು. ಇತ್ತೀಚೆಗೆ ನಡೆದ ಒಂದು ಅಧ್ಯಯನವು ಕೆಲವು ಕುತೂಹಲಕಾರಿಯಾದ ಮಾಹಿತಿಗಳನ್ನು ಬೆಳಕಿಗೆ ತಂದಿದೆ.

ದೇಶಾದ್ಯಂತ 39 ಪ್ರದೇಶಗಳ ಹಲವು ಶಿಕ್ಷಣ ಸಂಸ್ಥೆಗಳ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಿದಾಗ ಸಿಕ್ಕ ಅಂಕಿ-ಅಂಶಗಳಿವು.
ಶೇ. 61 ರಷ್ಟು ಮಂದಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಬೇಕಾದ ಪ್ರಾಥಮಿಕ ಕೌಶಲ್ಯಗಳಿರಲಿಲ್ಲ. ಪ್ರಾಥಮಿಕ ಕೌಶಲ್ಯ (Fundamental Skills) ಅಂದರೆ ಓಡುವ, ಜಿಗಿಯುವ, ಎಸೆಯುವ, ಹಿಡಿಯುವ, ದೇಹದ ಸಮತೋಲನ ಪ್ರದರ್ಶಿಸುವ ಕೌಶಲ್ಯಗಳು. ಇವನ್ನು ಕ್ರೀಡಾ ಪರಿಭಾಷೆಯಲ್ಲಿ Locomotive, Manipulative, non-manipulative skills ಎಂದು ವರ್ಗೀಕರಿಸುತ್ತಾರೆ.

ಶೇ. 43 ಮಂದಿ ವಿದ್ಯಾರ್ಥಿಗಳಿಗೆ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಇರಬೇಕಾದ ಕನಿಷ್ಠ ದೈಹಿಕ ಸಾಮರ್ಥ್ಯ ಇರಲಿಲ್ಲ. ಶೇ. 48 ಮಂದಿಗೆ ‘ಓಡು’ವುದೆಂಬ ನಿಸರ್ಗ ಸಹಜ ದೈಹಿಕ ಚಟುವಟಿಕೆಯೂ ಸರಿಯಾಗಿ ತಿಳಿದಿರಲಿಲ್ಲ. ಶೇ. 64 ಮಂದಿಗೆ ಜಿಗಿಯುವ ಕೌಶಲ್ಯವೇ ಗೊತ್ತಿರಲಿಲ್ಲ. ಇಲ್ಲಿ ಓಡುವ, ಜಿಗಿಯುವ... ಎಂಬ ಮಾತು ಕ್ರೀಡೆಗೆ ಸಂಬಂಧಿಸಿದ್ದಲ್ಲ. ಚಾಂಪಿಯನ್‌ಶಿಪ್‌ನ ಫಲಿತಾಂಶವಲ್ಲ. ಬದಲಿಗೆ ಬಾಲ್ಯ ಸಹಜ ಚಟುವಟಿಕೆಗಳಿಗೆ ಸಂಬಂಧಿಸಿರುವ ವಿದ್ಯಮಾನಗಳಿಂದಲೂ ಈ ಮಕ್ಕಳು ವಂಚಿತರಾಗುತ್ತಿದ್ದಾರೆಂಬುದನ್ನು ಈ ಸರ್ವೇ ನಿರೂಪಿಸುತ್ತಿದೆ. ಇನ್ನೊಂದೆರಡು ದಶಕದಲ್ಲಿ ಭಾರತ ಜಗತ್ತಿನ ಸೂಪರ್ ಪವರ್‌ಗಳಲ್ಲಿ ಒಂದಾಗಲಿದೆ ಎಂದು ಕೆಲವರು ತೌಡು ಕುಟ್ಟುತ್ತಿದ್ದಾರೆ. ಆದರೆ ಯಾವುದೇ ದೇಶದ ಆರ್ಥಿಕತೆ, ಸಮಾಜ ಶಕ್ತಿಯುತವಾಗಿದ್ದರೆ ಮಾತ್ರ ಅದು ಕ್ರೀಡೆಗಳಲ್ಲೂ ಪ್ರತಿಫಲಿಸುವುದು.

ಈಗ ಗೌರವ ಉಳಿಸಿಕೊಳ್ಳುವಷ್ಟು ಕ್ರೀಡಾ ಪದಕಗಳನ್ನು ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಕೂಟಗಳಲ್ಲಿ ಗೆಲ್ಲಲೇಬೇಕೆಂದು ಕೇಂದ್ರ ಸರಕಾರ ಬಯಸುತ್ತಿದೆ. ಅದಕ್ಕಾಗಿ ಅವರು ನಡೆಸುತ್ತಿರುವ ಪ್ರಯತ್ನಗಳು ಆಶ್ಚರ್ಯ ಹುಟ್ಟಿಸುವಂತಿವೆ.

ನ್ಯಾಷನಲ್ ಸ್ಕಿಲ್ ಟ್ರೈನಿಂಗ್ ಸ್ಪೋರ್ಟ್ಸ್ ಸ್ಕೀಂ, ರಾಜೀವ್‌ಗಾಂಧಿ ಖೇಲ್ ಅಭಿಯಾನ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ಸೈನ್ಸ್ ಆ್ಯಂಡ್ ರಿಸರ್ಚ್, ಮಣಿಪುರದಲ್ಲೊಂದು ಕ್ರೀಡಾ ವಿಶ್ವವಿದ್ಯಾನಿಲಯ, ಕಾಶ್ಮೀರಕ್ಕೊಂದು 200 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಇವೆಲ್ಲದರೊಂದಿಗೆ ನ್ಯಾಷನಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಕೋಡ್ ರೂಪಿಸಲೊಂದು ಸಮಿತಿ....ಅಬ್ಬಾ ಭಾರತ ಗಳಿಸಬಹುದಾದ ಮೆಡಲ್‌ಗಳ ಸಂಖ್ಯೆಗಿಂತ ಇವುಗಳ ಸಂಖ್ಯೆಯೇ ಹೆಚ್ಚಿರುವಂತಿದೆ.

ಇರಲಿ, ಕ್ರೀಡಾ ವಾತಾವರಣ ನಿರ್ಮಿಸಲು ಮೂಲಭೂತ ಸೌಕರ್ಯಗಳ ಅಗತ್ಯ, ಹಣದ ಅಗತ್ಯ ಖಂಡಿತಾ ಇರುತ್ತದೆ. ಆದರೆ ಈಗಿನ ಟ್ರೆಂಡ್ ಯಾವುದರ ಕಡೆಗಿದೆ ಎಂದು ಕೇಳಿಕೊಂಡರೆ ಆಶ್ಚರ್ಯವಲ್ಲ ಗಾಬರಿಯಾಗುವಂತಿದೆ.

ಭಾರತದ ಯುವ ಜನರು ಅದು ನಗರವಿರಲಿ, ಗ್ರಾಮಾಂತರವಿರಲಿ ದೊಡ್ಡ ಸಂಖ್ಯೆಯಲ್ಲಿ ಕ್ರೀಡಾ ಪ್ರೇಕ್ಷಕರಾಗುತ್ತಿರುವುದು ಕಂಡು ಬರುತ್ತಿದೆ. ಇವರ ಕ್ರೀಡಾಸಕ್ತಿಯು ಕ್ರಿಕೆಟ್ ಸ್ಟೇಡಿಯಂಗಳೊಳಗೆ ಇಲ್ಲಾ ಟಿವಿಗಳೆದಿರು ಮುಗಿದು ಹೋಗುತ್ತಿದೆ. ಟಿಕೆಟ್ ಮಾರಾಟ, ಟಿವಿ ಪ್ರಸಾರ, ಟಿ-ಶರ್ಟ್ ಮಾರಾಟ, ಜಾಹೀರಾತುಗಳೆಂಬ ಸಾವಿರಾರು ಕೋಟಿ ಆದಾಯ ತರುವ ಅಕ್ಷಯ ಕ್ರೀಡಾ ಪಾತ್ರೆಯೊಂದನ್ನು ಕ್ರೀಡಾ ವ್ಯಾಪಾರಿಗಳು ಈಗ ಸೃಷ್ಟಿಸಿದ್ದಾರೆ. ನನಗೆ ಅನೇಕ ಬಾರಿ ಈ ಐಪಿಎಲ್ ಕ್ರಿಕೆಟ್ ಆಟ ನೋಡುತ್ತಾ ಚೀರಾಡುವವರು ಬುದ್ಧಿಮಾಂದ್ಯರಂತೆ ಕಾಣುತ್ತಾರೆ.

ಭಾರತವು 2019ರ ಏಶ್ಯಾಡ್ಸ್‌ನಲ್ಲಿ 100 ಪದಕ ಪಡೆದು ಮೊದಲ 3 ಸ್ಥಾನದಲ್ಲಿರಬೇಕೆಂತಲೂ, 2020ರ ಒಲಿಂಪಿಕ್ಸ್‌ನಲ್ಲಿ ಕನಿಷ್ಠ 30 ಪದಕ ಗಳಿಸಿ ಟಾಪ್‌ಟೆನ್ ದೇಶಗಳ ಪಟ್ಟಿಯೊಳಗಿರಬೇಕೆಂತಲೂ ಒಂದು ಗುರಿ ಇರಿಸಿಕೊಂಡಿದೆ. ದೇಶದ ಶೇ. 50ರಷ್ಟು ವಿದ್ಯಾರ್ಥಿ-ಯುವಜನರಿಗೆ ಸರಿಯಾಗಿ ಓಡಲೂ ಬರುವುದಿಲ್ಲ ಅಥವಾ ಜೀವನದಲ್ಲಿ ಓಡುತ್ತಿಲ್ಲ ಆಡುತ್ತಿಲ್ಲ ಎಂಬ ವಿಷಯ ಗಮನಿಸಿದರೆ ನಮ್ಮ ಪಾಲಿನ ಪದಕಗಳು ದೂರದ ಮಂಗಳ ಗ್ರಹದಲ್ಲಿರಬಹುದು ಅನಿಸುತ್ತದೆ.

Parvateesha.b@gmail.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News