ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು...

Update: 2017-05-14 05:08 GMT

 ‘ಅಮ್ಮ’ - ಪ್ರತಿಯೊಂದು ಶಿಶುವಿನ  ಬಾಯಿಯಿಂದ ಬರುವ ಮೊದಲ ಪದ.  ಅಮ್ಮ  ಎರಡು ಅಕ್ಷರದಲ್ಲಿ ಅದೇನು ಹರುಷ, ಅದೇಷ್ಟೋ ಚೈತನ್ಯ. ಆ ಪದ ಸಾವಿರ ಅರ್ಥವನ್ನು, ಸಾವಿರ ಭಾವವನ್ನು ಸೂಚಿಸುತ್ತದೆ. ಅಂಗಳದಲ್ಲಿ ಆಟವಾಡುತ್ತಿದ್ದಾಗ ಬಿದ್ದು ಗಾಯವಾದ ಕಾಲಿಗೆ ಎಲೆಗಳನ್ನು ಉಜ್ಜಿ ಔಷಧಿ ಮಾಡಿ ಹೆಚ್ಚಿದ ತಾಯಿ ನಾ ಕಂಡ ಮೊದಲ ಡಾಕ್ಟರ್. ಒಡೆದು ಹೋದ ಆಟದ ಸಾಮಗ್ರಿಗಳಿಗೆ ಕಷ್ಟಪಟ್ಟ ಅಂಟು ಹಾಕಿ ಸರಿಪಡಿಸಿದ ತಾಯಿ ನಾ ಕಂಡ ಮೊದಲ ಇಂಜಿನಿಯರ್.

ಒಂದು ಮಗು ಜಾರಿ ಅಥವಾ ಎಡವಿ ಮುಗ್ಗರಿಸಿದಾಗ, ನೆಲಕ್ಕುರುಳುವಾಗ ಬಾಯಲ್ಲಿ ಬರುವ ಮೊದಲನೇ ಕೂಗು ಅಮ್ಮಾ… ಆ ಧ್ವನಿ ಕೇಳಿದ ಕೂಡಲೇ ಅದೆಲ್ಲಿದ್ದರೂ ಎತ್ತಿ ಸಂತೈಸಿ ಎದೆಗವುಚಿಕೊಳ್ಳುತ್ತಾಳೆ. ಆ ಅಪ್ಪುಗೆಯಲ್ಲಿ ಅದೆಂಥಾ ಆಪ್ತತೆ ಭದ್ರತೆ ನೋವು ಮರೆಸುವ ಶಕ್ತಿ ಇದೆ. ಮಗುವಿನ ಚೇಷ್ಟೆ ಮಿತಿಮೀರಿದಾಗ ಹಠ ಸಹನೆಯ ಎಲ್ಲೆದಾಟಿದಾಗ ಪಟ್ಟನೆ ಪೆಟ್ಟು ಕೊಟ್ಟು ಗದರಿದರೂ ಮನದೊಳಗೆ ಮಗುವಿಗೆ ಹೊಡೆದ ತನ್ನ ಕೈಗೆ ಹಿಡಿಶಾಪ ಹಾಕಿಕೊಳ್ಳುತ್ತಾಳೆ. ತನಗಿಂತಲೂ ತನ್ನಮಕ್ಕಳು ದೊಡ್ಡ ಹುದ್ದೆಗೇರಬೇಕೆಂದು ಆಶಿಸುತ್ತಾಳೆ. ತಾನು ದಾರಿ ತಪ್ಪಿದರೂ ತನ್ನ ಮಕ್ಕಳು ಒಳ್ಳೆಯ ಹೆಸರು ಪಡೆಯಬೇಕೆಂದೇ ಬಯಸುತ್ತಾಳೆ.

ಎಲ್ಲರೂ ಹೇಳುತ್ತಾರೆ. ಹೆಣ್ಣನ್ನು ನಂಬಬಾರದು. ಹೆಣ್ಣು ಮೋಸ ಮಾಡುತ್ತಾಳೆ. ಹೌದು, ಹೆಣ್ಣು ಮೋಸ ಮಾಡುವವಳು. ಮಕ್ಕಳಿಗೆ ಊಟ ಬಡಿಸಿ ಉಣಿಸುವಾಗ ‘ಊಟ ಮಾಡಿದ್ದೀರಾ ಅಮ್ಮಾ’ ಎಂದು ಕೇಳುವಾಗ ನನಗೆ ಹಸಿವಿಲ್ಲ. ನೀನು ಚೆನ್ನಾಗಿ ತಿನ್ನು ಎಂತ ಖಾಲಿ ಹೊಟ್ಟೆಯಲ್ಲಿ ಮಲಗಿ ಮೋಸ ಮಾಡುವ ಅಮ್ಮ.

ತುಂಬು ಗರ್ಭಿಣಿಯಾಗಿ ಮನೆಕೆಲಸವನ್ನು ಮಾಡುವಾಗ ನಿನಗೇನೂ ಕಷ್ಟ ಅನಿಸುತ್ತಿಲ್ಲವಾ ಎಂದು ಗಂಡ ಕೇಳುವಾಗ, ತನ್ನ ಸಂಕಷ್ಟಗಳನ್ನು ಅದುಮಿಟ್ಟು, ನನಗೇನೂ ತೊಂದರೆಯಿಲ್ಲ. ನೀವು ಧೈರ್ಯವಾಗಿ ಕೆಲಸಕ್ಕೆ ಹೋಗಿ ಎಂದು ಹೇಳುವ ಪತ್ನಿ ಮೋಸ ಮಾಡುವವಳು. ಹೀಗೆಯೇ ಮುಂದುವರಿಯುತ್ತದೆ ಹೆಣ್ಣಿನ ಮೋಸದಾಟ. ಎಲ್ಲಾ ನೋವುಗಳನ್ನು ಹೃದಯದಲ್ಲಿ ಬಚ್ಚಿಟ್ಟು ಮುಗಳುನಗೆಯೊಂದಿಗೆ ಏನೂ ಆಗಿಲ್ಲ ೆಂದು ಸುಳ್ಳು ಹೇಳಿ ಮೋಸ ಮಾಡಲು ಹೆಣ್ಣಿಗಲ್ಲದೆ.ಬೇರೆ ಯಾರಿಗೆ ಸಾಧ್ಯ...?

ಅಮ್ಮಾ ನೀ ನನ್ನ ಮೊದಲ ಗೆಳತಿಯಾದೆ, ಯಾರಲ್ಲೂ ಹೇಳಲಾರದ ಕಷ್ಟವನ್ನು ನಿನ್ನಲ್ಲಿ ಹೇಳಿದಾಗ ಸಾಂತ್ವನದ ಮಾತುಗಳನ್ನಾಡಿ ಹೃದಯದ ಭಾರವನ್ನು ಇಳಿಸಿದೆ. ನನಗೆ ಅಕ್ಷರ ಜ್ಞಾನವನ್ನು ನೀಡಿ ನನ್ನ ಮೊದಲ ಗುರುವಾದೆ. ಪ್ರೀತಿ ಉಣಿಸುತ್ತಲೇ ಬೆಳೆಸಿದೆ. ನೀನು ದಣಿದಿದ್ದರೂ ಪ್ರಿಯವಾದ ಆಹಾರ ಪದಾರ್ಥಗಳನ್ನು ತಯಾರಿಸಿ ನನಗೆ ಉಣಿಸಿದೆ. ನನಗೆ ನೋವಾದಾಗ ನನ್ನೊಂದಿಗೆ ನೀ ಅತ್ತೆ. ನನ್ನ ಕಣ್ಣೀರು ಒರೆಸಿದೆ. ನನ್ನ ನಲಿವಿನಲ್ಲಿ ನೀ ನಕ್ಕೆ, ಸೋಲಿನಲ್ಲಿ ಜತೆಯಾಗಿ ನಿಂತೆ.

 ಪ್ರೀತಿ ಏನೆಂದು ಕಲಿಸಿದೆ. ಮಡಿಲಲ್ಲಿ ಮಲಗಿಸಿ ಭದ್ರತೆಯನ್ನು ನೀಡಿದೆ. ಕೈ ಹಿಡಿದು ಮೇಲೆತ್ತಿ ಬದುಕ ದಾರಿಯ ತೋರಿದೆ. ನೀನು ನನ್ನ ಕೈ ಹಿಡಿದು ಜೊತೆಯಾಗಿ ನಿಂತರೆ ಈ ಜಗತ್ತನ್ನೇ ಗೆಲ್ಲುವೆ. ಅಮ್ಮಾ ನಿನಗಾಗಿ ಇಟ್ಟ ಪ್ರೀತಿಯನ್ನು ಯಾರೂ ಕದಿಯಲಾರರು. ಕಷ್ಟಕೊಟ್ಟರೂ ನೋಯಿಸಿಕೊಳ್ಳದ ಕರುಣಾಮಯಿ. ಮಕ್ಕಳಿಗೆ ತನ್ನ ಸರ್ವಸ್ವವನ್ನು ಮುಡಿಪಾಗಿಟ್ಟ ತ್ಯಾಗಮಯಿ. ಮಕ್ಕಳ ಆಸೆಗಳನ್ನು ಈಡೇರಿಸುವ ಜಗನ್ಮಯಿ. ಎಷ್ಟು ಬರೆದರೂ ಪದಗಳು ಸಾಕಾಗಲ್ಲ ಅಮ್ಮಾ ನಿನ್ನ ಬಣ್ಣಿಸಲು, ಋಣವ ತೀರಿಸಲು.

 ಈ ಜೀವ ನಿನಗಷ್ಟೆ ಮೀಸಲು. ನಿನ್ನ ವರ್ಣಿಸಲು ನಂಗಂತೂ ಖಂಡಿತಾ ಶಕ್ತಿಗಳಿಲ್ಲ. ನವಮಾಸ ಗರ್ಭದಲ್ಲಿಟ್ಟು, ತನ್ನ ಮಡಿಲಲ್ಲಿಟ್ಟು, ಹೊಟ್ಟೆತುಂಬಾ ಕೈ ತುತ್ತು ಹಾಕಿ ಬೆಳೆಸುವ ತಾಯಿಗೆ ತಾಯಿಯೇ ಸಾಟಿ

 ಈ ಜಗತ್ತಿನಲ್ಲಿ ಹುಡುಕುವ ಕೋಟ್ಯಾನು ಕೋಟಿ ಮಕ್ಕಳಲ್ಲಿ ಕೆಟ್ಟ ಮಕ್ಕಳು ದೊರಕಬಹುದು. ಆದರೆ ಕೆಟ್ಟ ತಾಯಿ ಮಾತ್ರ ಇರಲಾರದೆಂದೇ ಹೇಳಬಹುದು. ತಾಯಿ ಮಮಕಾರದ ಹಿಮವದ್ ಪರ್ವತ. ಹಾಗೆ ಬರೆಯುತ್ತಲೇ ಬಾಲ್ಯದಲ್ಲಿ ಓದಿದ ಒಂದು ನೀತಿಕಥೆ ನೆನಪಿಗೆ ಬರುತ್ತಿದೆ. ಪ್ರಿಯತಮೆಯೊಬ್ಬಳು ತನ್ನ ಪ್ರಿಯಕರನಿಗೆ ನೀನು ನಿನ್ನ ತಾಯಿಯನ್ನು ಕೊಂದು ಆಕೆಯ ಹೃದಯವನ್ನು ತಂದುಕೊಟ್ಟರೆ ಮಾತ್ರ ನಿನ್ನನ್ನು ಮದುವೆಯಾಗುತ್ತೇನೆ ಎಂದು ಹಠ ಹಿಡಿಯುತ್ತಾಳೆ. ಅವಳ ಮೋಹದಪಾಶಕ್ಕೆ ಬಲಿಯಾದ ಆ ಹುಚ್ಚು ಪ್ರೇಮಿ ನಿರ್ದಯವಾಗಿ ತನ್ನ ತಾಯಿಯ ಎದೆಸೀಳಿ ಹೃದಯವನು್ನ ಕಿತ್ತುಕೊಂಡು ಆತುರಾತುರವಾಗಿ ಓಡೋಡಿ ಬರುತ್ತಿರುವಾಗ ರಸ್ತೆಯಲ್ಲಿ ಎಡೆವಿ ಬೀಳುತ್ತಾನೆ. ಆಗ ಅವನ ಕೈಯಲ್ಲಿದ್ದ ಹೃದಯ ‘ಏನೂ ಕಂದಾ ಜೋರಾಗಿ ಬಿದ್ದು ಬಿಟ್ಟೆಯಾ? ನೋವಾಯಿತಾ...?’ ಎಂದು ಕೇಳಿದಾಗ ಆ ಹುಚ್ಚು ಪ್ರೇಮಿಗೆ ಮಾತೃ ವಾತ್ಸಲ್ಯದ ಬೆಲೆ ತಿಳಿಯುತ್ತದೆ. ಆದರೆ ಆ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು.

ಅಮ್ಮಂದಿರ ಪ್ರಪಂಚವೇ ಅಂತಹುದು ತನ್ನ ಗಂಡ ಮಕ್ಕಳು ಇದೇ ಅವಳಿಗೆ ಗೊತ್ತಿರುವ ಜಗತ್ತು. ಅಲ್ಲಿಂದ ಹೊರಬರುವ ಅವಕಾಶ ಇದ್ದರೂ ಆಕೆ ಅದರಲ್ಲಿಯೇ ಸಂತೋಷವನ್ನು ಕಾಣುತ್ತಾಳೆ. ತಾಯಿಯೇ ಮಕ್ಕಳ ಪಾಲಿಗೆ ಅಪರಂಜಿ, ಮನಸ್ಸಿನ ಸಂಬಂಧಿ. ಅವಳೇ ಮಕ್ಕಳ ಒಳ್ಳೆಯ ಭವಿಷ್ಯ ನಿರ್ಮಿಸುವ ಶಿಲ್ಪಿ.

ಈ ತಾಯಿಯೇ ಹೀಗೆ. ಮಕ್ಕಳಿಗಾಗಿ ತನ್ನ ಎಲ್ಲ ಆಸೆಗಳನ್ನು ಬಿಟ್ಟು ಬಿಡುತ್ತಾರೆ. ತನ್ನ ಸ್ವಾರ್ಥಗಳನ್ನು ಅಡಗಿಸಿಕೊಂಡು ಮಕ್ಕಳಿಗೆ ತನ್ನ ಜೀವನವನ್ನು ಮೀಸಲಿಡುತ್ತಾಳೆ. ಎಷ್ಟರ ಮಟ್ಟಿಗೆ ನಿಸ್ವಾರ್ಥಿಯಾಗುತ್ತಾಳೆಂದರೆ ದೇವರೆ ನನಗೇನಾದರೂ ಪರವಾಗಿಲ್ಲ. ನನ್ನ ಮಕ್ಕಳನ್ನು ಚೆನ್ನಾಗಿಡು ಎಂದು ಪ್ರಾರ್ಥಿಸುತ್ತಾಳೆ. ಅವಳ ಯೋಚನಾ ಲಹರಿಗಳು ಕೇವಲ ಮಕ್ಕಳಿಗಾಗಿಯೇ ಇರುತ್ತದೆ. ತಾಯಿ ಭೂಮಿಯಂತೆ.

 ಮಕ್ಕಳು ಏನು ತಪ್ಪು ಮಾಡಿದರೂ ಅವಳ ಅಂತಃಕರಣದಲ್ಲಿ ಕ್ಷಮೆ ಅನ್ನುವುದು ಇದ್ದೇ ಇರುತ್ತದೆ. ಅಮ್ಮನ ಅನುಭೂತಿಯೇ ಹಾಗೆ, ಇದ್ದಾಗ ಅದರ ಮೌಲ್ಯ ನಮಗೆ ತಿಳಿಯುವುದಿಲ್ಲ. ತಿಳಿದರೂ ಅದನ್ನು ವ್ಯಕ್ತಪಡಿಸುವ ಪ್ರಮೇಯವೂ ಬರುವುದಿಲ್ಲ.

 ಅವಳಿಗೆ ನೀವು ಕೊಡಿಸುವ ಒಡವೆ ವಸ್ತುಗಳು ಬೇಕಾಗಿಲ್ಲ. ಅವಳಿಗೆ ಬೇಕಾಗಿರುವುದು ನಿಮ್ಮ ಪ್ರೀತಿಯೊಂದೆ.

ಅವಳು ಮಕ್ಕಳಿಗೆ ಕೇಡು ಬಯಸುವುದಿಲ್ಲ. ಇಷ್ಟಾದರೂ ನಮ್ಮ ಸಮಾಜದಲ್ಲಿ ಮಕ್ಕಳು ತಮ್ಮ ತಂದೆ ತಾಯಿಯರನ್ನು ಮರೆಯುತ್ತಿರುವುದು ದುರ್ದೈವ.

ಬದುಕಿನ ಅನಿವಾರ್ಯತೆಯಿಂದಾಗಿ ನಾವು ಹೆತ್ತವರ ಜೊತೆ ಇಲ್ಲದೆ ದೂರ ಇರುತ್ತೇವೆ. ಕೆಲವು ಮಕ್ಕಳು ಬೆಳೆಯುತ್ತಾ ಹೋದಂತೆ ಅವರವರ ಲೋಕದಲ್ಲಿ ಜೀವಿಸುತ್ತಾ ಹೋಗುತ್ತಾರೆ. ಇಂದು ಅದೆಷ್ಟೋ ತಾಯಿಗಳಿಗೆ ಕೊನೆಗೆ ಮಕ್ಕಳು ಇದ್ದೂ ಇಲ್ಲದಂತಾಗಿದೆ.

ಜೀವನದಲ್ಲಿ ತಂದೆ ತಾಯಿಯರನ್ನು ನಿರ್ಲಕ್ಷಿಸಿ ನಮ್ಮ ಸ್ವಾರ್ಥಕ್ಕೆ ಪ್ರಾಮುಖ್ಯತೆ ಕೊಟ್ಟರೆ ಕೊನೆಗಾಲದ್ಲಿ ಪಾಪ ಪ್ರಜ್ಞೆ ಕಾಡಬಹುದು. ಅಂತಹ ಪಾಪ ಕರ್ಮ ಎಂದಿಗೂ ಮಾಡದೇ ಇರೋಣ. ಎಲ್ಲಾ ಅಮ್ಮಂದಿರಿಗೆ ತಾಯಿಯಂದಿರ ದಿನಾಚರಣೆಯ ಶುಭಾಶಯಗಳು.  

 

 

 ಡಾ.ಸಪ್ನ ಸುನಿಲ್ ಹೊಸಂಗಡಿ                                                                                 

Writer - ಡಾ.ಸಪ್ನ ಸುನಿಲ್ ಹೊಸಂಗಡಿ

contributor

Editor - ಡಾ.ಸಪ್ನ ಸುನಿಲ್ ಹೊಸಂಗಡಿ

contributor

Similar News