ಜಗತ್ತಿಗೆ ಬುದ್ದನ ಕಣ್ಣು ಬರಬೇಕಿದೆ- ಕೆ.ಬಿ.ಸಿದ್ದಯ್ಯ
ತುಮಕೂರು, ಮೇ14: ಈ ಭೂಮಿಯು ವಿನಾಶದ ಕಡೆಗೆ ಹೆಜ್ಜೆ ಹಾಕುತ್ತಿರುವ ಸಂದರ್ಭದಲ್ಲಿ ಜಗತ್ತಿಗೆ ಬುದ್ಧನ ಕಣ್ಣು ಬರಬೇಕಿದೆ ಎಂದು ಕವಿ ಕೆ.ಬಿ.ಸಿದ್ದಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆವರಣದಲ್ಲಿ ಮೈತ್ರಿ ಬಳಗದಿಂದ ಹಮ್ಮಿಕೊಂಡಿದ್ದ ಬುದ್ಧ ಜಯಂತಿ ಕವಿಗೋಷ್ಠಿಯನ್ನು ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಭೂಮಿಯ ಮಣ್ಣು ಈಗ ನಮ್ಮ ಜೊತೆ ಮಾತನಾಡುತ್ತಿರುವುದನ್ನು ನೋಡಿದರೆ ತಿರುಗುತ್ತಿರುವ ಭೂಮಿಯಲ್ಲಿ ಅಪಾಯಕಾರಿ ಗುಣ ಮೈದೆಳೆದಿದೆ ಅನ್ನಿಸುತ್ತಿದೆ. ಇದನ್ನೇ ಕೇಡು ಅನ್ನುವುದು. ಈ ಕೇಡಿನ ಸಂಕಷ್ಟದಿಂದ ಪಾರಾಗಲು ವಿಜ್ಞಾನವೂ ಸೇರಿದಂತೆ ಭೂಮಿಯ ಮೇಲಿನ ಸಕಲ ಜೀವಸಂಕುಲ ಬುದ್ಧನ ಕಡೆ ಮುಖ ಮಾಡದಿದ್ದರೆ ಬಹಳ ಕೇಡಿನ ಸನ್ನಿವೇಶ ಕಾದಿದೆ ಎಂದು ಎಚ್ಚರಿಸಿದರು.
ಬುದ್ಧನ ಕಡೆ ತಿರುಗಿದರೆ ಅಪಾಯದ ಸಂಕಟಗಳನ್ನು ವಿಮುಖವಾಗಿಸಬಹುದು. ಇಂದು ಮನುಷ್ಯ ಅವಿವೇಕಿತನ, ನಿಷ್ಕರುಣೆಯಿಂದ ಮಣ್ಣನ್ನು ಅಪಾಯದಂಚಿಗೆ ದೂಡುತ್ತಿರುವುದು ನಿಜಕ್ಕೂ ಆತಂಕಕಾರಿಯಾದ ವಿಷಯ. ಇಂದು ದೇಶದಲ್ಲಿ ರಾಮನ ಹೆಸರಿನಿಂದ ಧರ್ಮ, ದೇಶ ಆಳಬೇಕೆಂಬ ರಾಜಕಾರಣ ನಡೆಯುತ್ತಾ ಇದೆ. ಇಂತಹ ಸಂದರ್ಭದಲ್ಲಿ ಬುದ್ಧನ ಅಂತಃಕರಣ ಮಾತ್ರ ಪ್ರೀತಿ, ಕರುಣೆ, ಮೈತ್ರಿಯನ್ನು ನೀಡ ಬಲ್ಲದು, ಆದ್ದರಿಂದ ಬುದ್ಧನನ್ನು ಯಾವಾಗಲೂ ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳಬೇಕು. ಬುದ್ಧನನ್ನು ಬೀದಿಗೆ ತರುವಂತಹ ಕೆಲಸವಾಗಬಾರದು, ಬುದ್ಧನು ವೈಜ್ಞಾನಿಕವಾಗಿಯೆ ಸರಳವಾದ ಬದುಕನ್ನು ಹೇಳಿದ್ದಾನೆ. ಆದ್ದರಿಂದ ಆ ನಿಟ್ಟಿನಲ್ಲಿ ಎಲ್ಲರ ನಡೆ ಎಂದಿಗಿಂತ ಇಂದು ಮುಖ್ಯವಾಗಿದೆ ಎಂದು ಕೆ.ಬಿ.ಸಿದ್ದಯ್ಯ ತಿಳಿಸಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಎನ್.ನಾಗಪ್ಪ ಮಾತನಾಡಿ, ವಚನಕಾರರು ಅನುಭವದ ಮೇಲೆ ಮಾತನಾಡಿದರು, ಅವರ ಬರಹ ಸರಳ ಮತ್ತು ಬದುಕನ್ನು ಕಟ್ಟಿಕೊಡುವ ಮಾತುಗಳಾಗಿದ್ದವು ಎಂದ ಅವರು, ಕವಿ ಆದವನಿಗೆ ಧ್ಯಾನಸ್ಥ ಮನಸ್ಸಿರಬೇಕು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರ ಬಗ್ಗೆ ತೋರಿಕೆಗೆ ಆಚರಿಸಿದಂತೆ, ಮಾತನಾಡಿದಂತೆ ಮಾಡಬಾರದು. ಬುದ್ಧನು ಜಗತ್ತಿನ ಶ್ರೇಷ್ಠ ಸತ್ಯವನ್ನು ಹೇಳಿದ್ದು ಆತನ ನಡೆಯಲ್ಲಿ ಇಂದು ಸಕಲ ಜೀವರಾಶಿಗಳು ಚಲಿಸ ಬೇಕಿದೆ, ಆತನ ಧ್ಯಾನಸ್ಥ ಸ್ಥಿತಿ ಮಾನವನಲ್ಲಿ ಇಂದು ಅಗತ್ಯವಾಗಿ ಬೇಕಾಗಿದೆ ಎಂದರು.
ಹಿರಿಯ ಚಿಂತಕ ಪ್ರೊ.ಜಿ.ಎಂ.ಶ್ರಿನಿವಾಸಯ್ಯ ಮಾತನಾಡಿ, ಓದು ಕಳೆದು ಹೋಗುತ್ತಿರುವ ಕಾಲದಲ್ಲಿ ಇಂತಹ ಕಾರ್ಯಕ್ರಮಗಳು ಆಗತ್ಯ. ಮನುಷ್ಯನಿಗೆ ಸಂಗೀತ, ಓದು ಮಾತ್ರ ಆತನನ್ನು ಪರಿಪಕ್ವತೆಯನ್ನಾಗಿ ಮಾಡುತ್ತದೆ ಎಂದರು.
ಕುಮಾರಿ ರಮ್ಯಾ, ಜಾನಪದ ಕಲಾವಿದ ಕಂಟಕಲಗೆರೆ ಸಣ್ಣ ಹೊನ್ನಯ್ಯ, ಮೈತ್ರಿ ನ್ಯೂಸ್ ಸಂಪಾದಕ ಹೆಚ್.ವಿ.ವೆಂಕಟಾಚಲ, ಉಪಸ್ಥಿತರಿದ್ದರು.