ಮಳವಳ್ಳಿ ಸಮೀಪ ಆನೆಗಳು ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ
Update: 2017-05-14 21:31 IST
ಮಂಡ್ಯ, ಮೇ 14: ಮಳವಳ್ಳಿ ತಾಲೂಕಿನ ಮಾರ್ಗವಾಗಿ ಹಾದು ಹೋಗಿರುವ ರಾಷ್ಟ್ರೀಯ ಬಳಿ ಇರುವ ತುರುಗನೂರು ಗ್ರಾಮದ ಹೊರವಲಯದಲ್ಲಿ ರವಿವಾರ ಕಾಡನೆಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ರೈತರೊಬ್ಬರು ತಮ್ಮ ಜಮೀನಿಗೆ ತೆರಳಿದ್ದಾಗ ನೀಲಗಿರಿ ತೋಪಿನಲ್ಲಿ ನಾಲ್ಕು ಆನೆಗಳು ಇರುವುದನ್ನು ಕಂಡು ಗಾಬರಿಯಿಂದ ಓಡಿಬಂದು
ಗ್ರಾಮದಲ್ಲಿ ತಿಳಿಸಿದ್ದಾರೆ. ಕೂಡಲೇ ಕೆಲವು ಯುವಕರು ಆನೆಗಳಿರುವಲ್ಲಿಗೆ ಹೋಗಿ ಸುತ್ತಮುತ್ತಲ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತರನ್ನು ದೂರ ಹೋಗುವಂತೆ ಎಚ್ಚರಿಸಿದರು.
ಗ್ರಾಮಸ್ಥರು ಪಟಾಕಿ ಸಿಡಿಸಿ ಆನೆಗಳನ್ನು ಓಡಿಸಲು ಪ್ರಯತಿಸಿದ್ದಾರೆ. ಆದರೆ, ಇದರಿಂದ ಮತ್ತಷ್ಟು ಗಾಬರಿಗೊಂಡ ಆನೆಗಳು ಕಂಸಾಗರ ಬಳಿ ಇರುವ ರಾಜಣ್ಣ ಅವರ ಸರ್ವೆಮರ ತೋಪಿನಲ್ಲಿ ಅಡಗಿಕೊಂಡಿವೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿರುವ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.