ಯಡಿಯೂರಪ್ಪರೇ ನಮ್ಮ ನಾಯಕ, ಅವರ ನೇತೃತ್ವದಲ್ಲೇ ಬರ ಅಧ್ಯಯನ ಪ್ರವಾಸ: ಈಶ್ವರಪ್ಪ
ತುಮಕೂರು, ಮೇ 14: ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೇ ನಮ್ಮ ನಾಯಕರು. ಅವರ ನೇತೃತ್ವದಲ್ಲಿಯೇ ನಾವೆಲ್ಲರೂ ಬರ ಅಧ್ಯಯನ ಪ್ರವಾಸ ಮಾಡಲಿದ್ದೇವೆ. ನಾನ್ಯಾವುದೇ ಪ್ರತ್ಯೇಕ ಪ್ರವಾಸ ಕೈಗೊಂಡಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಬಿಜೆಪಿ ಮುಖಂಡ ಎಂ.ಬಿ.ನಂದೀಶ್ ಅವರ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 15ರಂದು ವಿಜಯಪುರದಲ್ಲಿ ಸಂಜೆ 4 ಗಂಟೆಗೆ ಕನಕ ಪುತ್ಥಳಿ ಅನಾವರಣಕ್ಕೆ ಆಹ್ವಾನಿಸಿದ್ದಾರೆ. ಆ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಬರಪರಿಹಾರ ಕಾರ್ಯ ಕುರಿತು ಮಾಹಿತಿ ಪಡೆಯಲಿದ್ದೇನೆ ಎಂದು ಹೇಳಿದರು.
'ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನಾಗಿ ಇದು ನನ್ನ ಜವಾಬ್ದಾರಿಯಾಗಿದೆ. ಇದಕ್ಕೆ ಈಶ್ವರಪ್ಪ ಅವರು ಪ್ರತ್ಯೇಕ ಬರ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ’ ಎಂದು ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ತಿಳಿಸಿದರು.