ಹುಳಿಯಾರು: ಸಿಡಿಲು ಬಡಿದು ಗುಡಿಸಲು ಭಸ್ಮ
ಹುಳಿಯಾರು, ಮೇ 14: ತೆಂಗಿನಮರಕ್ಕೆ ಸಿಡಿಲು ಬಡಿದ ಪರಿಣಾಮ ಮರದ ಪಕ್ಕದ ಗುಡಿಸಲಿಗೆ ಬೆಂಕಿ ತಗಲಿ ಗುಡಿಸಲು ಸಂಪೂರ್ಣ ಭಸ್ಮವಾದ ಘಟನೆ ಹುಳಿಯಾರು ಸಮೀಪದ ಸೀಗೆಬಾಗಿಯಲ್ಲಿ ಶನಿವಾರ ರಾತ್ರಿ ಜರಗಿದೆ.
ಗ್ರಾಮದ ಲಿಂಗದೇವರು ಅವರ ಗುಡಿಸಲು ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿದೆ. ಶನಿವಾರ ರಾತ್ರಿ ಲಿಂಗದೇವರು ಅವರ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಪರಿಣಾಮ ಮರ ಹೊತ್ತಿ ಉರಿದಿದೆ. ಈ ಸಂದರ್ಭದಲ್ಲಿ ಮರದಲ್ಲಿನ ಬೆಂಕಿಯ ಕಿಡಿಯೊಂದು ಪಕ್ಕದ ಗುಡಿಸಲಿಗೆ ತಗಲಿದೆ. ಗುಡಿಸಲು ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ವಿಷಯ ತಿಳಿದು ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಲು ಪ್ರಯತ್ನಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.
ಬೆಂಕಿಯಿಂದ ಗುಡಿಸಲಿನಲ್ಲಿದ್ದ 8 ಗ್ರಾಂ ತೂಕದ ಕಿವಿಯ ಓಲೆ, 15 ಸಾವಿರ ರೂ, 2 ಚೀಲ ರಾಗಿ, ರೇಷನ್, ಬಟ್ಟೆ, ಪಾತ್ರೆ ಹೀಗೆ ಅನೇಕ ವಸ್ತುಗಳು ಸುಟ್ಟು ಹೋಗಿವೆ.ಅಲ್ಲದೆ 2 ಹಸುಗಳಿಗೂ ಗಂಭೀರ ಗಾಯಗಳಾಗಿವೆ.ಹಸುಗಳನ್ನು ಉಳಿಸಲು ಹೋದ ಮನೆಯ ಮಾಲಕ ಲಿಂಗದೇವರ ಮೈ ಮೇಲೆ ಮೇಲ್ಛಾವಣಿಯ ತೀರು ಬಿದ್ದು ಗಂಭೀರ ಗಾಯಗಳಾಗಿವೆ.ಲಿಂಗದೇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಹುಳಿಯಾರು ಪೊಲೀಸ್, ಪಶು ಹಾಗೂ ಕಂದಾಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.