ಪ್ರವಾಹಕ್ಕೆ ಸಿಲುಕಿ ಸೇತುವೆಯಿಂದ ಜಾರಿದ ಬಸ್: ಸಿನಿಮೀಯ ಶೈಲಿಯಲ್ಲಿ ಪ್ರಯಾಣಿಕರನ್ನು ರಕ್ಷಿಸಿದ ಗ್ರಾಮಸ್ಥರು
ಗದಗ, ಮೇ 15:ಇಂತಹ ಸಾಹಸ ದೃಶ್ಯಗಳನ್ನು ನೀವು ಸಿನೆಮಾಗಳಲ್ಲಿ ಅಥವಾ ಕಾಲ್ಪನಿಕ ಕಥೆಗಳಲ್ಲಷ್ಟೇ ನೋಡಿರಲು, ಕೇಳಿರಲು ಸಾಧ್ಯ. ಭಾರೀ ಪ್ರವಾಹಕ್ಕೆ ಸಿಲುಕಿ ಸೇತುವೆಯಿಂದ ಬಸ್ಸೊಂದು ಜಾರಿದ್ದು ಇನ್ನೇನು ಬಸ್ ಮುಳುಗೇ ಬಿಟ್ಟಿತು ಎನ್ನುವ ಹಾಗಿದ್ದ ಸನ್ನಿವೇಶದಲ್ಲಿ ಎಲ್ಲಾ ಪ್ರಯಾಣಿಕರನ್ನು ಗ್ರಾಮಸ್ಥರೇ ಸಿನಿಮೀಯ ರೀತಿಯ ಸಾಹಸ ಮೆರೆದು ರಕ್ಷಿಸಿದ ಘಟನೆ ಗದಗದಲ್ಲಿ ನಡೆದಿದೆ,
ಲಕ್ಷ್ಮೇಶ್ವರದಿಂದ ಯಲ್ಲಾಪುರಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸೊಂದು ದೊಡ್ಡೂರು ಸಮೀಪದ ಸೇತುವೆ ಸಲುಪುತ್ತಲೇ ನೆರೆ ನೀರಿನ ರಭಸಕ್ಕೆ ಸಿಲುಕಿ ಭಾಗಶಃ ಸೇತುವೆಯ ಕೆಳಕ್ಕೆ ಜಾರಿದೆ. ಈ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಸೇತುವೆ ಸಂಪೂರ್ಣ ನೀರಿನಿಂದ ಆವೃತವಾಗಿತ್ತು. ಈ ಹಿನ್ನೆಲೆಯಲ್ಲಿ ಆತಂಕಗೊಂಡ ಪ್ರಯಾಣಿಕರು ಮುಂದಕ್ಕೆ ಬಸ್ಸನ್ನು ಚಲಾಯಿಸದಂತೆ ಚಾಲಕನಲ್ಲಿ ಹೇಳಿದ್ದಾರೆ. ಆದರೆ ಇದಕ್ಕೆ ಕಿವಿಗೊಡದ ಚಾಲಕ ಬಸ್ ಚಲಾಯಿಸಿದ್ದು, ಭಾರೀ ಗಾಳಿ ಹಾಗೂ ನೆರೆ ನೀರಿನ ರಭಸಕ್ಕೆ ಸಿಲುಕಿ ರಸ್ತೆಯ ಬದಿಗೆ ಬಂದ ಬಸ್ ಸೇತುವೆಯಿಂದ ಭಾಗಶ ಪಲ್ಟಿಯಾಗಿದೆ.
ಈ ಸಂದರ್ಭ ಪ್ರಯಾಣಿಕರು ಬೊಬ್ಬಿಟ್ಟಿದ್ದು, ತಕ್ಷಣವೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಸಿನಿಮೀಯ ರೀತಿಯ ಸಾಹಸ ಕಾರ್ಯಾಚರಣೆ ಕೈಗೊಂಡಿದ್ದಾರೆ. ಆದಷ್ಟು ಬೇಗ ಪ್ರಯಾಣಿಕರನ್ನು ರಕ್ಷಿಸದಿದ್ದಲ್ಲಿ ಬಸ್ ಸಂಪೂರ್ಣ ಮುಳುಗಡೆಯಾಗಿ ಕೆಳಗೆ ಕುಸಿಯುವ ಸಾಧ್ಯತೆಯೂ ಇತ್ತು. ತಕ್ಷಣ ಕಾರ್ಯಾಚರಣೆಗೆ ಮುಂದಾದ ಸ್ಥಳೀಯರು ಬಸ್ ನ ತುರ್ತು ನಿರ್ಗಮನ ಬಾಗಿಲಿಗೆ ಬಿಗಿಯಾದ ಹಗ್ಗ ಕಟ್ಟಿ ಅದರ ಆಧಾರದಲ್ಲಿ ಪ್ರವಾಹದ ನೀರನ್ನು ದಾಟಿ ಬರಲು ವ್ಯವಸ್ಥೆ ಮಾಡಿದ್ದಾರೆ. ಚಾಲಕ ಹಾಗೂ ನಿರ್ವಾಹಕ ಸೇರಿ ಬಸ್ ನಲ್ಲಿ ಐವರು ಪ್ರಯಾಣಿಕರಿದ್ದುದರಿಂದ ಶೀಘ್ರವೇ ಕಾರ್ಯಾಚರಣೆ ನಡೆಸಲು ಸಾಧ್ಯವಾಯಿತು, ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪುವಷ್ಟರಲ್ಲಿ ಗ್ರಾಮಸ್ಥರು ಎಲ್ಲಾ ಪ್ರಯಾಣಿಕರನ್ನು ರಕ್ಷಿಸಿದ್ದರು.