×
Ad

ದುಡಿಯುವ ಕೈಗೆ ಕೆಲಸ ಕೊಡುವುದು ಸರಕಾರದ ಪ್ರಮುಖ ಉದ್ದೇಶ: ಸಚಿವ ಕಾಗೋಡು ತಿಮ್ಮಪ್ಪ

Update: 2017-05-15 21:51 IST

ಸಾಗರ, ಮೇ 15: ದುಡಿಯುವ ಕೈಗೆ ಕೆಲಸ ಕೊಡುವುದು ರಾಜ್ಯ ಸರ್ಕಾರದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು. ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ತಾಲ್ಲೂಕು ಆಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೌಶಲ್ಯ ಕರ್ನಾಟಕ ಕಾರ್ಯಕ್ರಮವನ್ನು ಅವರು ಆನ್‌ಲೈನ್‌ನಲ್ಲಿ ಉದ್ಯೋಗಾಕಾಂಕ್ಷಿಗಳ ಹೆಸರು ನೋಂದಾಯಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

ನಮ್ಮಲ್ಲಿ ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ, ತಮ್ಮ ಜ್ಞಾನವನ್ನು ಅಲ್ಲಿ ಧಾರೆ ಎರೆಯುತ್ತಿದ್ದಾರೆ. ಕೌಶಲ್ಯ ಕರ್ನಾಟಕ ಕಾರ್ಯಕ್ರಮದ ಮೂಲಕ ಪ್ರತಿಭಾ ಪಲಾಯನವನ್ನು ತಪ್ಪಿಸುವುದು ರಾಜ್ಯ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ನಿರುದ್ಯೋಗಿ ಯುವಜನರ ಉದ್ಯೋಗ ಬೇಡಿಕೆ ಮತ್ತು ಸಮೀಕ್ಷೆ ನಡೆಸಿ, ಉದ್ಯೋಗಕ್ಕೆ ನೋಂದಾವಣೆ ಮಾಡಿಕೊಳ್ಳುವ ಇಂತಹ ಕಾರ್ಯಕ್ರಮ ರಾಜ್ಯದ ಎಲ್ಲ ತಾಲ್ಲೂಕುಗಳಲ್ಲೂ ಹಮ್ಮಿಕೊಳ್ಳಲಾಗಿದೆ ಎಂದರು.

ಹಿಂದೆ ಉದ್ಯೋಗಕ್ಕೆ ನೋಂದಾಯಿಸಿಕೊಳ್ಳಲು ಜಿಲ್ಲಾ ಕೇಂದ್ರಗಳಿಗೆ ಹೋಗಬೇಕಾಗಿತ್ತು. ಇದರಿಂದ ನಿರುದ್ಯೋಗಿ ವಿದ್ಯಾವಂತರು ಸಾಕಷ್ಟು ಖರ್ಚು ಮಾಡಿಕೊಳ್ಳುತ್ತಿದ್ದರು. ಅದನ್ನು ತಪ್ಪಿಸಿ, ಸ್ಥಳದಲ್ಲಿಯೆ ಉದ್ಯೋಗಕ್ಕೆ ಹೆಸರು ನೊಂದಾಯಿಸಿಕೊಳ್ಳುವ ಯೋಜನೆ ಕೌಶಲ್ಯ ಕರ್ನಾಟಕದ್ದಾಗಿದೆ. ಆನ್‌ಲೈನ್ ಮೂಲಕ ಹೆಸರು ನೊಂದಾಯಿಸಿಕೊಂಡ ನಿರುದ್ಯೋಗಿ ಪದವಿಧರರಿಗೆ ಅವರು ಬಯಸುವ ಕ್ಷೇತ್ರದಲ್ಲಿ ಸೂಕ್ತ ತರಬೇತಿಯನ್ನು ಸಹ ನೀಡಲಾಗುತ್ತದೆ ಎಂದು ತಿಳಿಸಿದರು.

ಯೋಜನೆಯಡಿ 530 ವಿವಿಧ ಹುದ್ದೆಗಳಿಗೆ ಸರ್ಕಾರದ ವತಿಯಿಂದ ಸೂಕ್ತ ತರಬೇತಿ ನೀಡಲಾಗುತ್ತದೆ. ಹೀಗೆ ತರಬೇತಿ ಪಡೆದವರಿಗೆ ಕ್ಯಾಂಪಸ್ ಸೆಲೆಕ್ಷನ್ ಸೇರಿದಂತೆ ಬೇರೆಬೇರೆ ಕಡೆಗಳಲ್ಲಿ ಉದ್ಯೋಗ ಪಡೆಯಲು ಅವಕಾಶವಿರುತ್ತದೆ. 7 ದಿನ ಸಮೀಕ್ಷೆ ನೋಂದಾವಣೆ ಕಾರ್ಯಕ್ರಮ ನಡೆಯಲಿದ್ದು, ಯುವಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ತಹಶೀಲ್ದಾರ್ ತುಷಾರ್ ಬಿ. ಹೊಸೂರು ಮಾತನಾಡಿ ಮೇ 15ರಿಂದ 22ರವರೆಗೆ ರಾಜ್ಯ ಸರ್ಕಾರದ ಸೂಚನೆಯಂತೆ ಕೌಶಲ್ಯ ತರಬೇತಿ ಆಕಾಂಕ್ಷಿತ ನಿರುದ್ಯೋಗಿ ಯುವಜನರ ಬೇಡಿಕೆ ಮತ್ತು ಸಮೀಕ್ಷೆ ನೊಂದಾವಣೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ಕುರಿತು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಾಗಿದ್ದು, ನಿರುದ್ಯೋಗಿ ವಿದ್ಯಾವಂತ ಯುವಜನರಿಂದ ಮೊದಲ ದಿನವೆ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಉಷಾ ಎನ್., ಉಪವಿಭಾಗಾಧಿಕಾರಿ ನಾಗರಾಜ್ ಆರ್. ಸಿಂಗ್ರೇರ್ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News