ಬಾಗೇಪಲ್ಲಿ: ಕೌಶಲ ತರಬೇತಿ
ಬಾಗೇಪಲ್ಲಿ, ಮೇ 15: ನಿರುದ್ಯೋಗ ಸಮಸ್ಯೆಯನ್ನು ತೊಲಗಿಸಲು ಸರಕಾರ ನೂತನ ಕೌಶಲ ಅಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಯ ಇಲಾಖೆಯನ್ನು ಸಜ್ಜುಗೊಳಿಸಿರುವುದು ಸಂತಸದ ವಿಷಯ ಎಂದು ತಾಪಂ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು ತಿಳಿಸಿದರು.
ಅವರು ಸೋಮವಾರ ತಾಪಂ ಸಭಾಂಗಣದಲ್ಲಿ ಕೌಶಲ ಅಭಿವೃದ್ದಿ ಉದ್ಯಮಶೀಲನೆ ಮತ್ತು ಜೀವನೋಪಾಯ ಇಲಾಖೆ ತಾ.ಪಂ., ತಾಲೂಕು ಆಡಳಿತ ಸಹಯೋಗದೊಂದಿಗೆ ಏರ್ಪಡಿಸಿದ್ದ ಕೌಶಲ ತರಬೇತಿ ಆಕಾಂಕ್ಷಿತ ಯುವ ಜನರ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿ ಹಾಗೂ ವೆಬ್ ಪೋರ್ಟಲ್ ಚಾಲನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜನಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ಯುವ ಜನತೆಗೆ ನಿರುದ್ಯೋಗ ಸಮಸ್ಯೆ ಬಗ್ಗೆ ಅರಿವು ಮೂಡಿಸಿ ಉದ್ಯೋಗ ಪಡೆಯಲು ಅರ್ಜಿ ಹಾಕಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ.ಮಂಜುನಾಥ್, ತಾಪಂ ಇಒ ಬಿ.ಈಶ್ವರಪ್ಪ ಮಾತನಾಡಿದರು.
ಈ ಸಂದರ್ಭ ತಹಶೀಲ್ದಾರ್ ಆರ್. ಶೂಲದಯ್ಯ, ತಾ ಪಂ ಉಪಾಧ್ಯಕ್ಷೆ ಸರಸ್ವತಮ್ಮ, ಶಿವರಾಮರೆಡ್ಡಿ, ಕೈಗಾರಿಕಾ ವಿಸ್ತರಣಾಧಿಕಾರಿ ಬಾಬು, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಅಮರನಾಥ, ಸಾಕ್ಷರತಾ ಸಮನ್ವಯ ಅಧಿಕಾರಿ ಎನ್.ಶಿವಪ್ಪ, ಸರಕಾರಿ ಐಟಿಐ ಕಾಲೇಜಿನ ಉಪನ್ಯಾಸಕ ಗಿರೀಶ್ ಮತ್ತಿತರರು ಉಪಸ್ಥರಿದ್ದರು.