ಶಿವಮೊಗ್ಗದಲ್ಲೂ 'ವಾನಾಕ್ರೈ' ದಾಳಿ: 600 ಡಾಲರ್ ನೀಡುವಂತೆ ಹ್ಯಾಕರ್ ಗಳ ಬೇಡಿಕೆ
ಶಿವಮೊಗ್ಗ, ಮೇ. 16: ಇಡೀ ವಿಶ್ವಾದ್ಯಂತ ಆತಂಕ ಸೃಷ್ಟಿಸಿರುವ, ಸರಿಸುಮಾರು 150 ಕ್ಕೂ ಅಧಿಕ ರಾಷ್ಟ್ರಗಳ ಲಕ್ಷಾಂತರ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡಿರುವ ’ವಾನಾಕ್ರೈ’ ವೈರಸ್ ಭಾರತದ ವಿವಿಧೆಡೆ ದಾಳಿಯಿಟ್ಟಿರುವ ಮಾಹಿತಿಯ ಬೆನ್ನಲ್ಲೇ, ಶಿವಮೊಗ್ಗದಲ್ಲಿಯೂ 'ವಾನಾಕ್ರೈ' ವೈರಸ್ ಸೈಬರ್ ದಾಳಿಯ ಪ್ರಕರಣವೊಂದು ಮಂಗಳವಾರ ಬೆಳಕಿಗೆ ಬಂದಿದೆ.
ಶಿವಮೊಗ್ಗದ ಪೆಸೆಟ್ ಕಾಲೇಜ್‌ನ ಪ್ರಾಧ್ಯಾಪಕರೊಬ್ಬರ ಲ್ಯಾಪ್‌ಟ್ಯಾಪ್ 'ವಾನಾಕ್ರೈ' ವೈರಸ್ ದಾಳಿಗೆ ತುತ್ತಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಬೆಳಗ್ಗೆ ಪ್ರಾಧ್ಯಾಪಕರು ಕಾಲೇಜ್‌ನಲ್ಲಿ ತಮ್ಮ ಲ್ಯಾಪ್‌ಟ್ಯಾಪ್ ಆನ್ ಮಾಡಿದಾಗ, 'ವಾನಾಕ್ರೈ' ವೈರಸ್ ಮಾಲ್‌ವೇರ್‌ಗೆ ತುತ್ತಾಗಿ ಫೈಲ್‌ಗಳು ಲಾಕ್ ಆಗಿರುವುದು ಅವರ ಗಮನಕ್ಕೆ ಬಂದಿದೆ. ಲ್ಯಾಪ್‌ಟ್ಯಾಪ್‌ನಲ್ಲಿರುವ ಲಾಕ್ ಆಗಿರುವ ಫೈಲ್‌ಗಳು ಸುರಕ್ಷಿತವಾಗಿ ಲಭಿಸಬೇಕಾದರೆ 600 ಡಾಲರ್ (ಸರಿಸುಮಾರು 38,000 ರೂ.) ಹಣ ನೀಡುವಂತೆ ಹ್ಯಾಕರ್‌ಗಳು ಬೇಡಿಕೆಯಿಟ್ಟಿದ್ದಾರೆ. 3 ದಿನದಲ್ಲಿ ಹಣ ಸಂದಾಯ ಮಾಡದಿದ್ದರೆ ಲ್ಯಾಪ್‌ಟ್ಯಾಪ್‌ನಲ್ಲಿರುವ ಎಲ್ಲ ಪೈಲ್‌ಗಳನ್ನು ಹಾಳುಗೆಡುವುವುದಾಗಿ ಹ್ಯಾಕರ್‌ಗಳು ಬೆದರಿಕೆ ಸಂದೇಶವನ್ನು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಾಧ್ಯಾಪಕರು ಈ ವಿಷಯವನ್ನು ಕಾಲೇಜ್‌ನ ಇತರ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯವರ ಗಮನಕ್ಕೆ ತಂದಿದ್ದಾರೆ. ಆದರೆ ಹ್ಯಾಕರ್‌ಗಳ ಬೇಡಿಕೆಯಿಂತೆ ಹಣ ಪಾವತಿ ಮಾಡಲು ಮುಂದಾಗಿಲ್ಲ. 'ವಾನಾಕ್ರೈ' ವೈರಸ್ ಮಾಲ್‌ವೇರ್‌ನಿಂದ ಲಾಕ್ ಆಗಿರುವ ಲ್ಯಾಪ್‌ಟ್ಯಾಪ್ ಓಪನ್ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಮೂಲಗಳು ಮಾಹಿತಿ ತಿಳಿಸಿವೆ. ಈ ಕುರಿತಂತೆ ಇನ್ನಷ್ಟೆ ಹೆಚ್ಚಿನ ಮಾಹಿತಿ ಲಭಿಸಬೇಕಾಗಿದೆ.