ದಯಾಮರಣ ಕೋರಿ ಕುಟುಂಬದಿಂದ ಧರಣಿ

Update: 2017-05-16 12:47 GMT

ಹಾಸನ, ಮೇ 16: ನಿಯಮಾನುಸಾರ ಗಣಿಗಾರಿಕೆ ನಡೆಸಲಾಗುತ್ತಿದ್ದರೂ ಕೆಲವರು ನ್ಯಾಯಾಲಯದ ಆದೇಶವನ್ನು ದಿಕ್ಕರಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಡಿಸಿ ಕಚೇರಿ ಮುಂದೆ ನೊಂದ ಇಡೀ ಕುಟುಂಬ ದಯಾಮರಣ ಕೋರಿ ಅಹೋರಾತ್ರಿ ಧರಣಿ ನಡೆಸುತ್ತಿದೆ.

ಅರಸೀಕೆರೆ ತಾಲೂಕು ಹೆಬ್ಬಾರನಹಳ್ಳಿ ಗ್ರಾಮದಲ್ಲಿ ಮೂರು ಎಕರೆ ಜಮೀನನ್ನು ಶರೀಫ್ ಉನ್ನೀಸಾ ಎಂಬುವರ ಹೆಸರಿನಲ್ಲಿದೆ. ಸದರಿ ಜಮೀನು ಭಾರೀ ಕಲ್ಲು ಬಂಡೆಗಳಿಂದ ಕೂಡಿದ್ದು ಕೃಷಿಗೆ ಯೋಗ್ಯವಾಗಿಲ್ಲಿಲ್ಲ. ಈ ಹಿನ್ನಲೆಯಲ್ಲಿ ನಾವು ಆ ಜಮೀನನ್ನು ಕಲ್ಲು ಗಣಿಗಾರಿಕೆಗೆ ನೀಡಲು ನಿರ್ಧರಿಸಿದ್ದೆವು. ಈ ಜಮೀನಿನಲ್ಲಿ ಪರಿಶೀಲನೆ ನಡೆಸಿದಾಗ ಜಮೀನಿನ ಒಂದು ಎಕರೆ ಪ್ರದೇಶದಲ್ಲಿ ದ್ವಿವರ್ಣದ ಆಲಂಕಾರಿಕ ಕಲ್ಲು ಇರುವುದು ತಿಳಿದು ಬಂದಿತು. ಇದಕ್ಕೆ ಸಂಬಂಧಿಸಿದ ರಾಯಲ್ಟಿ ಪಾವತಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುಮತಿ ಪಡೆದು ಗಣಿಗಾರಿಕೆ ಆರಂಭಿಸುವ ಪ್ರಯತ್ನ ನಡೆಸಿದಾಗ ಹಾರನಹಳ್ಳಿಯ ರಾಜಕಾರಣಿ ಗೌಸ್ ಅಹ್ಮದ್, ರಿಯಾಝ್ ಅಹ್ಮದ್, ಅನ್ಸರ್ ಪಾಷ ಹಾಗೂ  ಇತರರು ಗಣಿಗಾರಿಕೆ ಅಡ್ಡಿಪಡಿಸುತ್ತಿರುವುದಾಗಿ ದೂರಿದ್ದಾರೆ.

ಅವರು ಶಾಶ್ವತವಾಗಿ ಗಣಿಗಾರಿಕೆ ನಡೆಸಕೂಡದು ಎಂದು ಸತ್ರ ಹಾಗು ಉಚ್ಛ ನ್ಯಾಯಾಲಯದಲ್ಲಿ ಎರಡು ಬಾರಿ ದಾವೆ ಹೂಡಿದ್ದು, ವಿಚಾರಣೆ ವೇಳೆ ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸಿ ನಮ್ಮ ಪರವಾಗಿ ತೀರ್ಪು ನೀಡಿತು ಎಂದು ಉನ್ನೀಸಾರ ಕುಟುಂಬ ತಿಳಿಸಿದೆ.

ಗೌಸ್ ಅಹ್ಮದ್ ಮತ್ತು ತಂಡ ಪದೇ ಪದೇ ನಮಗೆ ಕಿರುಕುಳ ನೀಡುತ್ತಲೇ ಇದೆ. ನಮಗೆ ರಕ್ಷಣೆ ನೀಡಿಲು ಬಂದ ಪೊಲೀಸ್ ಅಧಿಕಾರಿಯೊಂದಿಗೂ ಅನುಚಿತವಾಗಿ ವರ್ತಿಸಿದ್ದಾರೆ. ಜೀವನದುದ್ದಕ್ಕೂ ಕಡು ಬಡತನದಲ್ಲಿ ಬಾಳಿದ ನನಗೆ ಈಗ ಅವರ ಕಿರುಕುಳ ಸಹಿಸಲು ಸಾಧ್ಯವಾಗುತಿಲ್ಲಾ. ಪೊಲೀಸರನ್ನೂ ಬೆದರಿಸುವ ಅವರು ನಮ್ಮ ಪ್ರಾಣಕ್ಕೆ ತೊಂದರೆ ಉಂಟು ಮಾಡುತ್ತಿದ್ದು, ಭೀತಿಯಲ್ಲೇ ಕಾಲ ಕಳೆಯಬೇಕಾಗಿದೆ. ನಮಗೆ ತೊಂದರೆ ನೀಡುತ್ತಿರುವವರ ವಿರುದ್ಧ ಸೂಕ್ತ ಕಠಿಣ ಕ್ರಮ ಜರುಗಿಸಿ ಗಣಿಗಾರಿಕಗೆ ಅವಕಾಶ ಕೊಡಬೇಕು ಇಲ್ಲವೇ ಇಡೀ ಕುಟುಂಬದ ದಯಾಮರಣಕ್ಕೆ ಅನುಮತಿ ನೀಡಬೇಕೆಂದು ಉನ್ನೀಸಾ ಕುಟುಂಬ ಒತ್ತಾಯಿಸಿದೆ.  ನಮ್ಮ ಬೇಡಿಕೆ ಈಡೇರುವವರೆಗೆ ನಾವು ಅಹೋರಾತ್ರಿ ಧರಣಿ ಕೂರುವುದಾಗಿ ಅವರು ಎಚ್ಚರಿಸಿದ್ದಾರೆ.
    ಪತ್ರಿಕಾಗೋಷ್ಠಿಯಲ್ಲಿ  ಜಮೀನಿನ ಮಾಲಕ ಶರೀಫ್ ಉನ್ನೀಸಾ, ಅತೀಫ್ ಪಾಷ ಹಾಗೂ ಎಎಪಿ ಮುಖಂಡ ಅಕ್ಮಲ್ ಜಾವೀದ್ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News