ದುಷ್ಟಶಕ್ತಿ ದಮನವಾದಾಗ ಉತ್ತಮ ಸಮಾಜ ನಿರ್ಮಾಣ: ನ್ಯಾ.ವಸ್ತ್ರಮಠ
ಚಳ್ಳಕೆರೆ, ಮೇ 16: ಸಮಾಜದಲ್ಲಿ ಕೊಲೆ, ಸುಲಿಗೆ, ಡ್ರಗ್ಸ್ ಮಾಫಿಯಾ, ಲೈಂಗಿಕ ದೌರ್ಜನ್ಯದಂತಹ ಕೃತ್ಯ ಎಸಗುವ ವ್ಯಕ್ತಿಗಳಿಗೆ ಶಿಕ್ಷೆಯಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ. ವಸ್ತ್ರಮಠ ತಿಳಿಸಿದ್ದಾರೆ.
ನಗರದ ವಾಸವಿ ಕಲ್ಯಾಣಮಂಟಪದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಅಣಿಯೋಜನೆ ಇಲಾಖೆ, ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಎಲ್ಲ ಪೊಲೀಸ್ ಉಪಅಧೀಕ್ಷಕ, ವೃತ್ತನಿರೀಕ್ಷಕ ಹಾಗೂ ಪಿಎಸ್ಸೈಗಳಿಗೆ ಆಯೋಜಿಸಿದ್ದ ಕಾನೂನು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಪಿಗೆ ಶಿಕ್ಷೆಯಾಗುವಂತೆ ಪೊಲೀಸರು ಪ್ರಕರಣ ದಾಖಲಿಸುವಾಗ ಸ್ಥಳದಲ್ಲಿ ತನಿಖೆ ವೇಳೆ ಸಾಕ್ಷ್ಯಗಳನ್ನು ಸಂಗ್ರಹಣೆ ಮಾಡುತ್ತಾರೆ. ಆಗ ಫೋಟೊ, ವೀಡಿಯೋ ತೆಗೆದರೆ ಆರೋಪಿಗಳಿಗೆ ಭಯ ಹುಟ್ಟುತ್ತದೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ದೂರು ಬಂದ ಕೂಡಲೇ ಮಹಿಳೆಯನ್ನು ವೈದ್ಯ ಕೀಯ ಪರೀಕ್ಷೆಗೊಳಪಡಿಸಬೇಕು. ದೂರು ದಾಖಲಿಸಿಕೊಂಡು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಕೊಲೆ ಪ್ರಕರಣ ಗಳ ಕೇಸ್ ದಾಖಲಿಸುವಾಗ ಸ್ಥಳ ಪರಿಶೀಲನೆ ಮಾಡುವಾಗ ಸ್ಥಳದಲ್ಲಿರುವ ವಸ್ತುಗಳ ಸಂ್ರಹಣಾ ಸಾಕ್ಷಿದಾರರ ಸಹಿ ಪಡೆಯಬೇಕು. ಆರೋಪಿಗೆ ಶಿಕ್ಷೆಯಾಗುವಂತಹ ಪಂಚನಾಮೆ ಮಾಡಬೇಕು ಎಂದು ತಿಳಿಸಿದ್ದಾರೆ.
ಸಮಾಜಘಾತುಕ ಶಕ್ತಿಗಳು ವಿದ್ಯಾರ್ಥಿಗಳಿಗೆ ಡ್ರಗ್, ಅಫೀಮ್‌ನಂತಹ ಮಾದಕ ವಸ್ತುಗಳನ್ನು ಮಾರಾಟ ಮಾಡಿ ಯುವ ಪೀಳೆಗೆಯನ್ನು ನಾಶ ಮಾಡುತ್ತಿವೆ. ಪೊಲೀಸ್ ಅಧಿಕಾರಿಗಳು ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗುವಂತೆ ಪ್ರಕರಣ ದಾಖಲಿಸಬೇಕು. ಪೊಲೀಸ್ ಅಧಿಕಾರಿಗಳು ಇಂತಹ ಕಾನೂನು ಕಾರ್ಯಾಗಾರದ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಕಾವೇರಿ ಬಿ.ಕಲ್ಮಠ ಮಾತನಾಡಿ, ‘ನ್ಯಾಯ ಕೇಳಿ ನ್ಯಾಯಾಲಯಕ್ಕೆ ಕೈ ಮುಗಿದು ಬರುವವರಿಗೆ ನ್ಯಾಯ ದೊರಕಿಸಿ ಕೊಡಬೇಕಾದರೆ ಅಜ್ಞಾನ, ತಪ್ಪುಕಲ್ಪನೆಗಳಿಂದ ಹೊರಬರಬೇಕು. ಆಗ ಮಾತ್ರ ನ್ಯಾಯಾಲಯದಲ್ಲಿ ನ್ಯಾಯ ಕೊಡಲು ಸಾಧ್ಯ’ ಎಂದು ತಿಳಿಸಿದ್ದಾರೆ.
ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪೋಕ್ಸೊ ಕಾಯ್ದೆ ಏಕೆ, ಹೇಗೆ ಬಂತು ಎನ್ನುವುದನ್ನು ತಿಳಿಯಬೇಕು. ಇಂತಹ ಪ್ರಕರಣಗಳನ್ನು ದಾಖಲಿಸುವಾಗ ಪೊಲೀಸ್ ಅಧಿಕಾರಿಗಳು ಪಂಚನಾಮೆ ಮಾಡುವಾಗ ಆರೋಪಿಗಳಿಗೆ ಶಿಕ್ಷೆಯಾಗುವಂತಹ ತನಿಖಾ ವರದಿಯಲ್ಲಿ ದಾಖಲು ಮಾಡಬೇಕು. ಇಲ್ಲದಿದ್ದಲ್ಲಿ ನಿರಾಪರಾಧಿಗಳಿಗೆ ನ್ಯಾಯ ದೊರೆಯುವುದಿಲ್ಲ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ ರಂಗರಾಜನ್ ಮಾತನಾಡಿ, ಅತ್ಯಾಚಾರ ಪ್ರಕರಣದಲ್ಲಿ ವೈದ್ಯಕೀಯ ಪರೀಕ್ಷೆ ವರದಿಯನ್ನು ಮಾಡಿಸುವಲ್ಲಿ ನಿರ್ಲಕ್ಷ ವಹಿಸುತ್ತಾರೆ. ಮತ್ತೆ ಇಂತಹ ಪ್ರಕರಣಗಳು ಮರುಕಳಿಸದಂತೆ ಆರೋಪಿಗಳಿಗೆ ಶಿಕ್ಷೆಯಾಗಿ ನಿರಾಪರಾಧಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಕಿವಿಮಾತು ಹೇಳಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಕ್ರಿಮಿನಲ್ ಪ್ರಕರಣಗಳಲ್ಲಿ ತನಿಖೆ ನಡೆಸುವ ಬಗ್ಗೆ, ಪ್ರಧಾನ ಸರಕಾರಿ ಅಭಿಯೋಜಕ ಬಿ.ಜಯರಾಮ್ ಮಾದಕ ವಸ್ತುಗಳ ಕಾಯ್ದೆ, ಪ್ರಭಾರ ಉಪ ನಿರ್ದೇಶಕ ಎಸ್.ವಿ. ಪಾಟೀಲ್ ಕ್ರಿಮಿನಲ್ ಪ್ರಕರಣಗಳಲ್ಲಿ ತನಿಖೆಯ ನ್ಯೂನತೆಗಳು ಮತ್ತು ವಂಚನೆ ಪ್ರಕರಣಗಳ ಬಗ್ಗೆ ಹಾಗೂ ವಿಶೇಷ ಸರಕಾರಿ ಅಭಿಯೋಜಕ ಎನ್. ಬೀರಲಿಂಗಪ್ಪ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಬಗ್ಗೆ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಾಗಾರದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್. ದಿಂಡಲಕೊಪ್ಪ, ಅಪರ ಸಿವಿಲ್ ನ್ಯಾಯಾಧೀಶ ಕೋಟೆಪ್ಪ ಕಾಂಬ್ಕೆ, ವಕೀಲರ ಸಂಘದ ಅಧ್ಯಕ್ಷ ಜಿ.ಆರ್. ಅಶ್ವತ್ಥ ನಾಯಕ, ಅಬಕಾರಿ ಉಪಆಯುಕ್ತ ನಾಗರಾಜಪ್ಪ, ಡಿವೈಎಸ್ಪಿಗಳಾದ ಎಸ್.ರೋಶನ್ ಜಮೀರ್, ವೆಂಕಟ ನಾಯಕ, ಸಿಪಿಐ ಎನ್.ತಿಮ್ಮಣ್ಣ, ತಹಶೀಲ್ದಾರ್ ಟಿ.ಸಿ. ಕಾಂತರಾಜ್ ಹಾಗೂ ಜಿಲ್ಲೆಯ ಎಲ್ಲ ತಾಲೂಕಿನ ಪಿಎಸ್ಸೈ, ಸಿಪಿಐ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.