ತುಂಗಭದ್ರಾ ಏತ ನೀರಾವರಿ ಕಾಮಗಾರಿ ಕಳಪೆ: ಕಾಂಗ್ರೆಸ್ ಮುಖಂಡ ಷಣ್ಮುಖಪ್ಪ
ಶಿವಮೊಗ್ಗ, ಮೇ 17: ಕೋಟ್ಯಾಂತರ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಶಿವಮೊಗ್ಗ ತಾಲೂಕಿನ ತುಂಗಭದ್ರಾ ಏತ ನೀರಾವರಿ ಯೋಜನೆ ಕಾಮಗಾರಿ ಕಳಪೆಯಾಗಿದ್ದು, ಭಾರೀ ಅವ್ಯವಹಾರ ನಡೆದಿದೆ. ಈ ಬಗ್ಗೆ ಸಿಒಡಿ ಅಥವಾ ಉನ್ನತ ಮಟ್ಟದ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಷಣ್ಮುಖಪ್ಪ ಆಗ್ರಹಿಸಿದ್ದಾರೆ.
ಸಣ್ಣ ನೀರಾವರಿ ಇಲಾಖೆಯ ಸಚಿವ ಟಿ.ಬಿ. ಜಯಚಂದ್ರ ಕಳೆದ ವರ್ಷ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅವ್ಯವಹಾರ ಕಂಡುಬಂದಲ್ಲಿ ಗುತ್ತಿಗೆ ರದ್ದುಗೊಳಿಸುವ ಆದೇಶ ಹೊರಡಿಸಿದ್ದರು. ಜೊತೆಗೆ ಕಾಮಗಾರಿಗೆ ಅಗತ್ಯವಾಗಿದ್ದ ಹೆಚ್ಚುವರಿ ಐದೂವರೆ ಕೋಟಿ ರೂ.ಗಳಷ್ಟು ಮೊತ್ತವನ್ನು ಬಿಡುಗಡೆ ಮಾಡಿದ್ದರು. ಪ್ರಸ್ತುತ ನಡೆಯುತ್ತಿರುವ ಕಾಮಗಾರಿಯೂ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಪೈಪ್‌ಗಳ ಜಾಯಿಂಟ್‌ಗಳು ಕಿತ್ತು ಬರುತ್ತಿವೆ. ಇದು ನಿಜಕ್ಕೂ ವಿಷಾದಕರ ಸಂಗತಿಯಾಗಿದ್ದು, ಹೊಳಲೂರು ಸುತ್ತಮುತ್ತಲಿನ ಭಾಗದ ರೈತರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಒಡಿ ತನಿಖೆಗೊಪ್ಪಿಸಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡುವುದಾಗಿ ಷಣ್ಮುಖಪ್ಪ ತಿಳಿಸಿದರು.