ಜೈಲಿಗೆ ಕಳುಹಿಸಲು ಕಾಂಗ್ರೆಸ್ ಹುನ್ನಾರ: ಎಚ್.ಡಿ. ಕುಮಾರಸ್ವಾಮಿ
Update: 2017-05-17 18:57 IST
ರಾಯಚೂರು, ಮೇ 17: ಜಂತಕಲ್ ಮೈನಿಂಗ್ ಪ್ರಕರಣ ಸಂಬಂಧ ನ್ಯಾಯಾಲಯ ಏಳು ದಿನಗಳ ಕಾಲ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ಸಮನ್ಸ್ ಜಾರಿ ಹಿನ್ನೆಲೆಯಲ್ಲಿ ಮೇ 18ರಂದು ಎಸ್‌ಐಟಿ ಮುಂದೆ ಹಾಜರಾಗುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬುಧವಾರ ದೇವದುರ್ಗ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಜಾಮೀನು ನೀಡದಂತೆ ಸರಕಾರ ಕಸರತ್ತು ನಡೆಸಿದೆ. ನನ್ನನ್ನು ಒಂದು ಬಾರಿಯಾದರೂ ಜೈಲಿಗೆ ಕಳುಹಿಸಿ ಕೊಡಬೇಕು ಎಂದು ಸರಕಾರ ಹುನ್ನಾರ ನಡೆಸಿದೆ. ಕಾಂಗ್ರೆಸ್ ಸರಕಾರ ಸಂಪೂರ್ಣ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಆ ಬಗ್ಗೆ ಆತ್ಮವಿಶ್ವಾಸವಿದೆ ಎಂದರು.
ಜೆಡಿಎಸ್ ರಾಜ್ಯದಲ್ಲಿ ಬಲಗೊಳ್ಳುತ್ತಿದೆ. ಅದಕ್ಕೆ ಅಡ್ಡಿಪಡಿಸಲು ಕಾಂಗ್ರೆಸ್ ಸರಕಾರ ಪ್ರಯತ್ನ ನಡೆಸುತ್ತಿದೆ ಎಂದು ಅವರು ಇದೇ ವೇಳೆ ದೂರಿದರು.