×
Ad

'ಡಿ.ಶಿವಪ್ಪ ರೋಲಿಂಗ್ ಗೋಲ್ಡ್ ಕಪ್' ಕಾಲ್ಚೆಂಡು ಪಂದ್ಯಾವಳಿಗೆ ಚಾಲನೆ

Update: 2017-05-17 19:23 IST

ಮಡಿಕೇರಿ, ಮೇ 17 : ಸುಂಟಿಕೊಪ್ಪದ ಬ್ಲೂ ಬಾಯ್ಸ್ ಯೂತ್ ಕ್ಲಬ್ ಆಶ್ರಯದಲ್ಲಿ 22ನೇ ವರ್ಷದ ರಾಜ್ಯ ಮಟ್ಟದ ಡಿ.ಶಿವಪ್ಪ ರೋಲಿಂಗ್ ಗೋಲ್ಡ್ ಕಪ್ ಕಾಲ್ಚೆಂಡು ಪಂದ್ಯಾವಳಿ ಮೇ 19 ರಿಂದ 28ರವರೆಗೆ ನಡೆಯಲಿದೆ.
 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಲಬ್‌ನ ಅಧ್ಯಕ್ಷರಾದ ಬಿ.ಬಿ.ಮೋನಪ್ಪ ಪೂಜಾರಿ ಪಂದ್ಯಾವಳಿ ಕುರಿತು ಮಾಹಿತಿ ನೀಡಿದರು. ಸ್ಥಳೀಯ ಕಾಫಿ ಬೆಳೆಗಾರ ಹಾಗೂ ದಾನಿ ಡಿ.ವಿನೋದ್ ಶಿವಪ್ಪ ಆಯೋಜಿಸಲಾಗುತ್ತಿರುವ ಈ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಪರ್ಯಾಯ ಪಾರಿತೋಷಕದೊಂದಿಗೆ 30 ಸಾವಿರ ನಗದು (ಪ್ರಥಮ) ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 20 ಸಾವಿರ ನಗದು ಬಹುಮಾನ ನೀಡಲಾಗುವುದು. ಅಲ್ಲದೆ ಪಂದ್ಯಾವಳಿಯಲ್ಲಿ ಭಾಗವಹಿಸುವ ಹೊರಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವ ತಂಡಗಳಿಗೆ ಊಟ, ವಸತಿ ಮತ್ತು ಪ್ರಯಾಣ ಭತ್ಯೆಯನ್ನು ನೀಡಲಾಗುವುದು ಎಂದು ತಿಳಿಸಿದರು.
 

ಸುಂಟಿಕೊಪ್ಪದ ಜಿ.ಎಂ.ಶಾಲಾ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಪ್ರಮುಖವಾಗಿ ರೈಲ್ವೇಸ್, ಜಾವಾ, ಕೆಆರ್‌ಮಿಲ್ಸ್, ಎಚ್‌ಎಎಲ್, ಎಚ್‌ಎಂಟಿ, ಬಿಇಎಲ್, ಐಟಿಐ, ಚೆನ್ನೈ ಹಾಗೂ ಕೋಲ್ಕತ್ತಾ ತಂಡಗಳು ಆಟವನ್ನು ಪ್ರದರ್ಶಿಸಿದ್ದು, ಈ ವರ್ಷದ ಪಂದ್ಯಾಟದಲ್ಲಿ ಕೊಡಗಿನ ಪ್ರತಿಷ್ಠಿತ ತಂಡಗಳು ಹಾಗೂ ರಾಷ್ಟ್ರೀಯ ಪಂದ್ಯಾಟಗಳಲ್ಲಿ ಖ್ಯಾತಿ ಪಡೆದಿರುವ ಕೇರಳದ ಕೂತುಪರಂಬು, ಬೆಂಗಳೂರು, ಮಂಡ್ಯ, ಮೈಸೂರು, ಮಂಗಳೂರು, ಕುಂಬ್ಳೆ, ಉಪ್ಪಳ, ಕ್ಯಾಲಿಕಟ್, ಇರಿಟ್ಟಿ, ಬೈಲುಕುಪ್ಪೆ ತಂಡಗಳು ಭಾಗವಹಿಸಲಿವೆ ಎಂದು ಹೇಳಿದರು.

ಮೇ 19ರಂದು ಪಂದ್ಯಾವಳಿಯನ್ನು ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಹಾಸನ ಜಿಲ್ಲಾ ನ್ಯಾಯಾಲಯದ ಅಧ್ಯಕ್ಷ, ಎ.ಲೋಕೇಶ್‌ಕುಮಾರ್ ಉದ್ಘಾಟಿಸಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಮೇ 28ರಂದು ನಡೆಯುವ ಫೈನಲ್ ಪಂದ್ಯಾಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಇತರ ಜನಪ್ರತಿನಿಧಿಗಳು, ರಾಜ್ಯ ಮತ್ತು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಪಂದ್ಯಾವಳಿಯ ಪ್ರಾಯೋಜಕರಾದ ಡಿ.ವಿನೋದ್ ಶಿವಪ್ಪ ಭಾಗವಹಿಸಲಿದ್ದಾರೆ ಎಂದು ಮೋನಪ್ಪ ತಿಳಿಸಿದರು.

 ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸೂರ್ಯಪ್ರಕಾಶ್, ಖಜಾಂಚಿ ಯು.ಎಂ.ಅನಿಲ್, ನಿರ್ದೇಶಕ ಟಿ.ವಿ.ಪ್ರಸನ್ನ ಹಾಗೂ ಮಾಜಿ ಅಧ್ಯಕ್ಷ ಆಲಿಕುಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News