ಕಲಾಪಕ್ಕೆ ಗೈರು: ಅಂಬರೀಶ್‌ಗೆ ನೋಟಿಸ್
ಮಂಡ್ಯ, ಮೇ 17: ವಿಧಾನಸಭೆಯ ಕಲಾಪಗಳಿಗೆ ನಿರಂತರ ಗೈರು ಹಾಜರು ಸಂಬಂಧ ಶಾಸಕ ಅಂಬರೀಶ್ ವಿರುದ್ಧ ಜೆಡಿಯು ಜಿಲ್ಲಾಧ್ಯಕ್ಷ ಬಿ.ಎಸ್ .ಗೌಡ ವಿಧಾನ ಸಭಾಧ್ಯಕ್ಷರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ವಿಧಾನ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅಂಬರೀಶ್ ಅವರಿಗೆ ನೋಟಿಸ್ ಜಾರಿಮಾಡಿದ್ದಾರೆ.
ಅಂಬರೀಶ್ ಸಚಿವ ಸ್ಥಾನ ಕಳೆದುಕೊಂಡಾಗಿನಿಂದ ವಿಧಾನಸಭೆ ಕಲಾಪಗಳಿಗೆ ನಿರಂತರವಾಗಿ ಗೈರಾಗುವ ಮೂಲಕ ತಮ್ಮ ಜವಾಬ್ಧಾರಿಯನ್ನು ಸರಿಯಾಗಿ ನಿರ್ವಹಿಸದೆ ಕ್ಷೇತ್ರದ ಜನರ ಕುಂದುಕೊರತೆ ನಿಭಾಯಿಸಲು ವಿಫಲರಾಗಿದ್ದು, ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಬಿ.ಎಸ್. ಗೌಡ ವಿಧಾನಸಭಾಕ್ಷರಿಗೆ ದೂರು ನೀಡಿದ್ದರು.
ದೂರನ್ನು ಪರಿಶೀಲಿಸಿರುವ ವಿಧಾನಸಭಾಧ್ಯಕ್ಷರು, ತಮ್ಮ ವಿರುದ್ಧ ನೀಡಿರುವ ದೂರಿನ ಬಗ್ಗೆ ಅಭಿಪ್ರಾಯ ತಿಳಿಸುವಂತೆ ವಿಧಾನಸಭಾ ಸಚಿವಾಲಯದ ಶಾಸನ ರಚನಾ ಶಾಖೆಯ ಅಧೀನ ಕಾರ್ಯದರ್ಶಿ ಬಿ.ಎಸ್.ಮಹಾಲಿಂಗೇಶ್ ಮೇ 8 ರಂದು ಅಂಬರೀಶ್ ಅವರಿಗೆ ನೋಟಿಸ್ ನೀಡಿದ್ದಾರೆ. ಅಂಬರೀಶ್ ಅವರ ದೊಡ್ಡರಸಿನಕೆರೆ ಗ್ರಾಮದ ವಿಳಾಸಕ್ಕೆ ನೋಟಿಸ್ ಬಂದಿದೆ ಎಂದು ಪತ್ರಿಕೆಗೆ ಮಾಹಿತಿ ದೊರಕಿದೆ.